ಕ್ಷೇತ್ರದಲ್ಲಿ ಏರುತ್ತಿದೆ ಚುನಾವಣಾ ಕಾವು

Election fever is rising in the field
Published on

ಮಡಿಕೇರಿ:

೧೮ನೇ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಬೆನ್ನಲ್ಲೇ ಮೈಸೂರು-ಕೊಡಗು ಕ್ಷೇತ್ರದಲ್ಲೂ ಚುನಾವಣಾ ಕಾವು ರಂಗೇರುತ್ತಿದೆ. ಎರಡೂ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಧಿಕೃತ ಅಭ್ಯರ್ಥಿಗಳ ಹೆಸರು ಪ್ರಕಟಿಸಿರುವುದರಿಂದ ಸ್ಪರ್ಧಾಕಣದ ಚಿತ್ರಣ ಸ್ಪಷ್ಟವಾಗಿದೆ. ಚುನಾವಣೆಯಲ್ಲಿ ಯುವ ಮತದಾರರ ಪಾತ್ರ ಮಹತ್ವದ್ದಾಗಿದ್ದು, ಯುವಕರನ್ನು ಸೆಳೆಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸುವುದು ಚುನಾವಣೆ ಸಮಯದಲ್ಲಿ ಸಾಮಾನ್ಯ. ಇದೇ ಸಂದರ್ಭದಲ್ಲಿ ಮೊದಲ ಬಾರಿ ಮತದಾನ ಮಾಡುವವರು ತಮ್ಮ ಹಕ್ಕು ಚಲಾಯಿಸಲು ಕುತೂಹಲದಿಂದ ಕಾಯುತ್ತಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗುರುವಾರ (ಮಾ.೨೮) ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಇದರೊಂದಿಗೆ ಚುನಾವಣಾ ಕಾವು ಕೂಡ ಹೆಚ್ಚಾಗಲಿದೆ. ಲೋಕಸಭೆಗೆ ಮೈಸೂರು ಜತೆ ಸೇರಿಕೊಂಡಿರುವ ಕೊಡಗಿನಲ್ಲಿ ಒಟ್ಟು ೪,೬೬,೧೫೪ ಮತದಾರರು ಇದ್ದು, ಇವರಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಅಧಿಕವಾಗಿದ್ದು. ೨,೩೭,೬೬೦ ಮಹಿಳಾ ಮತದಾರರು ಇದ್ದಾರೆ. ೨,೨೮,೪೭೮ ಪುರುಷ ಮತದಾರರು ಮತ್ತು ೧೬ ಇತರೆ ಮತದಾರರು ಮತದಾರರ ಪಟ್ಟಿಯಲ್ಲಿ ನೋಂದಣಿ ಆಗಿದ್ದಾರೆ.
ಕೊಡಗಿನಲ್ಲಿ ಕೇವಲ ೨ ವಿಧಾನಸಭಾ ಕ್ಷೇತ್ರಗಳು ಮಾತ್ರ ಇದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಇದ್ದಾರೆ. ಇಲ್ಲಿ ಒಟ್ಟು ೨,೩೬,೫೬೨ ಮತದಾರರು ಇದ್ದು, ಮಹಿಳಾ ಮತದಾರರ ಸಂಖ್ಯೆಯೇ ಅಧಿಕವಾಗಿದೆ. ೧,೨೧,೩೯೪ ಮಹಿಳಾ ಮತದಾರರು ಇದ್ದರೆ, ೧,೧೫,೧೫೯ ಪುರುಷ ಮತದಾರರು ಮತ್ತು ೯ ಇತರೆ ಮತದಾರರು ಇದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨,೨೯,೫೯೨ ಮತದಾರರು ಇದ್ದು, ಇಲ್ಲೂ ಮಹಿಳಾ ಮತದಾರರದ್ದೇ ಪ್ರಾಬಲ್ಯ ಕಂಡುಬರುತ್ತಿದೆ. ಇಲ್ಲಿ ೧,೧೬,೨೬೬ ಮಹಿಳಾ ಮತದಾರರು ಇದ್ದು, ೧,೧೩,೩೧೯ ಪುರುಷ ಮತದಾರರು ಮತ್ತು ೭ ಇತರೆ ಮತದಾರರು ಇದ್ದಾರೆ.

ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲು ಕುತೂಹಲದಿಂದ ಕಾಯುತ್ತಿರುವ ೧೮ ರಿಂದ ೧೯ರ ವಯೋಮಾನದ ೯,೦೭೬ ಯುವ ಮತದಾರರು ಈ ಲೋಕಸಭಾ ಚುನಾವಣೆಯಲ್ಲಿ ತಮ್ಮ ಚೊಚ್ಚಲ ಮತ ಚಲಾವಣೆ ಮಾಡಲಿದ್ದಾರೆ. ಮೊದಲ ಬಾರಿಗೆ ಮತದಾನ ಮಾಡುತ್ತಿರುವವರಲ್ಲಿ ಪುರುಷ ಮತದಾರರು ೪,೫೪೭ ಮತ್ತು ೪,೫೨೯ ಮಹಿಳಾ ಮತದಾರರು ಇದ್ದಾರೆ. ಚುನಾವಣೆ ಮತ್ತು ಮತದಾನದ ಚಟುವಟಿಕೆಗಳನ್ನು ದೂರದಿಂದ ಗಮನಿಸುತ್ತಿದ್ದ ೧೮ ರಿಂದ ೧೯ರ ವಯೋಮಾನದ ಯುವ ಸಮೂಹ ಈ ಬಾರಿ ತಾವೇ ಸ್ವತಃ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಸಂಭ್ರಮದಲ್ಲಿ ಇದ್ದಾರೆ. ಲೋಕಸಭೆಗೆ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನೂ ಪಡೆದುಕೊಳ್ಳುತ್ತಿದ್ದಾರೆ.

ಆಗಷ್ಟೇ ಯವ್ವನಕ್ಕೆ ಕಾಲಿಡುತ್ತಿರುವ ೧೮ ರಿಂದ ೧೯ರ ವಯೋಮಾನದ ಯುವ ಸಮೂಹ ಸಾಮಾನ್ಯವಾಗಿ ಯಾವುದೇ ಸಿದ್ದಾಂತಗಳಿಗೆ ಅಂಟಿಕೊಂಡಿರುವುದಿಲ್ಲ. ಹಸಿಮಣ್ಣಿನ ಗೋಡೆಯಂಥ ಮನಸ್ಸು ಈ ವಯೋಮಾನದವರದ್ದಾಗಿರುತ್ತದೆ. ಇವರು ಒಮ್ಮೆ ಒಂದು ಸಿದ್ದಾಂತ ಅಥವಾ ರಾಜಕೀಯ ಪಕ್ಷವನ್ನು ಒಪ್ಪಿಕೊಂಡರೆ ನಂತರ ಸುಲಭಕ್ಕೆ ಬದಲಾಗುವುದಿಲ್ಲ ಎನ್ನುವುದು ರಾಜಕೀಯ ಪಂಡಿತರ ಅನುಭವದ ಮಾತು. ಹಾಗಾಗಿಯೇ ಈ ವರ್ಗದ ಮತದಾರರನ್ನು ಸೆಳೆಯಲು ಪ್ರಮುಖ ರಾಜಕೀಯ ಪಕ್ಷಗಳು ಸಾಕಷ್ಟು ಕಸರತ್ತು ಮಾಡುತ್ತವೆ. ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಸಹಕರಿಸುವುದರಿಂದ ಆರಂಭವಾಗಿ ಮತಗಟ್ಟೆಗೆ ಕರೆದುಕೊಂಡು ಬಂದು ಮತ ಚಲಾಯಿಸುವುದನ್ನು ಖಾತರಿಪಡಿಸಿಕೊಳ್ಳುವ ತನಕ ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಇಂಥ ಮತದಾರರ ಹಿಂದೆ ಬಿಟ್ಟಿರುತ್ತಾರೆ.

ಮೊದಲ ಬಾರಿಗೆ ಹಕ್ಕು ಚಲಾವಣೆ ಮಾಡುತ್ತಿರುವವರಲ್ಲಿ ಹಲವಾರು ಪ್ರಶ್ನೆ ಮತ್ತು ಗೊಂದಲಗಳು ಸಾಮಾನ್ಯವಾಗಿ ಇರುತ್ತದೆ. ಮತಗಟ್ಟೆಗೆ ತೆರಳುವ ಸಂದರ್ಭ ಸಣ್ಣದಾಗಿ ಭಯ, ಕುತೂಹಲವನ್ನೂ ಅವರಲ್ಲಿ ಕಾಣಬಹುದು. ಇದರ ಲಾಭ ಪಡೆದುಕೊಳ್ಳುವ ರಾಜಕೀಯ ಪಕ್ಷಗಳ ಕಾರ್ಯಕರ್ತರು ಇಂಥ ಮತದಾರರ ಗೊಂದಲಗಳನ್ನು ನಿವಾರಣೆ ಮಾಡುವುದರ ಜತೆಗೆ ಅವರ ಕುತೂಹಲದ ಪ್ರಶ್ನೆಗಳಿಗೆ ಉತ್ತರಗಳನ್ನೂ ಕೊಡುತ್ತಾರೆ. ಈ ವಯೋಮಾನದ ಮತದಾರರನ್ನು ತಮ್ಮ ಪಕ್ಷ, ಸಿದ್ಧಾಂತದ ಕಡೆಗೆ ಸೆಳೆದುಕೊಳ್ಳಲು ಈ ಅವಕಾಶಗಳನ್ನು ಬಳಸಿಕೊಳ್ಳುತ್ತಾರೆ.

ಹೊಸ ಮತ್ತು ಯುವ ಮತದಾರರನ್ನು ಚುನಾವಣಾ ಪ್ರಕ್ರಿಯೆಯತ್ತ ಸೆಳೆಯಲು ಚುನಾವಣಾ ಆಯೋಗವೂ ವರ್ಷಪೂರ್ತಿ ಒಂದಿಲ್ಲೊಂದು ಪ್ರಯತ್ನಗಳನ್ನು ನಡೆಸುತ್ತಿರುತ್ತದೆ. ಮತದಾನ ಜಾಗೃತಿ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಸಾಕಷ್ಟು ಫಲ ಕೊಟ್ಟಿವೆ. ಕಾಲೇಜುಗಳಲ್ಲಿ ಆಯೋಜಿಸುವ ಇಂಥ ಕಾರ್ಯಕ್ರಮಗಳಿಂದ ಚುನಾವಣೆ, ಮತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡುತ್ತಿದೆ. ೧೮ ವರ್ಷ ತುಂಬುತ್ತಿದ್ದಂತೆಯೇ ಯುವ ಜನಾಂಗ ಸ್ವಯಂಪ್ರೇರಣೆಯಿಂದ ಮತದಾರರ ಪಟ್ಟಿಗೆ ಸೇರ್ಪಡೆ ಆಗುವಂತಾದರೆ ಈ ರೀತಿಯ ಕಾರ್ಯಕ್ರಮಗಳಿಗೆ ಅರ್ಥ ಬರುವಂತಾಗುತ್ತದೆ. ಇವರ ಮೇಲೆ ಮತ್ತೊಬ್ಬರ ಪ್ರಭಾವ ಆಗುವುದು ತಪ್ಪಿದಂತಾಗಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಸಹಕಾರಿ ಆಗುತ್ತದೆ ಎನ್ನುವುದು ಪ್ರಜ್ಞಾವಂತರ ಮಾತು.

ಈ ಬಾರಿ ಮೊದಲನೇ ಸಲ ಮತದಾನ ಮಾಡುತಿದ್ದೇನೆ. ಶಾಲಾ ಕಾಲೇಜು ಚುನಾವಣೆಗಳಲ್ಲಿ ಮತದಾನ ಮಾಡುತ್ತಿದ್ದೆ. ಆದರೆ ಇದೀಗ ನಮ್ಮ ದೇಶದ ಸಂಸದರನ್ನು ಆಯ್ಕೆ ಮಾಡಲು ಅವಕಾಶ ಸಿಕ್ಕಿರುವುದು ಸಂತೊಷವಾಗುತ್ತಿದೆ. ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವ ಹೆಮ್ಮೆಯಿದೆ.
ಪೃಥ್ವಿರಾಜ್, ಕಣಿವೆ ಬಸವನಹಳ್ಳಿ

ಮೊದಲ ಬಾರಿ ಮತದಾನ ಮಾಡುತ್ತಿದ್ದೇನೆ. ತುಂಬಾ ಸಂತೋಷವಾಗುತ್ತಿದೆ. ನಮ್ಮ ಪೋಷಕರು ಮತದಾನ ಮಾಡಲು ತೆರಳುವಾಗ ನಾನು ಯಾವಾಗ ನಮ್ಮನ್ನು ಆಳುವವರನ್ನು ಆಯ್ಕೆ ಮಾಡಲು ಅವಕಾಶ ಸಿಗುತ್ತದೆ ಎಂದು ಕಾಯುತ್ತಿದ್ದೆ. ಆ ಅವಕಾಶ ಇದೀಗ ಸಿಕ್ಕಿದೆ.
ಶ್ರೀಕಂಠ ಎಂ.ಯು., ಕಣಿವೆ ಬಸವನಹಳ್ಳಿ

ಪ್ರಜಾಪ್ರಭುತ್ವದಲ್ಲಿ ಮತದಾನ ತುಂಬಾ ಮಹತ್ವದ್ದಾಗಿದೆ. ಮತದಾನ ಮಾಡುವವರು ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಪ್ರಾಮಾಣಿಕರಾಗಿ ಮತದಾನ ಮಾಡಬೇಕು. ಅದೇ ರೀತಿ ನಾನು ಈ ಬಾರಿ ಮತದಾನ ಮಾಡುತ್ತೇನೆ. ಸಮಯಕ್ಕೆ ಸರಿಯಾಗಿ ಪೋಷಕರೊಂದಿಗೆ ಮತಗಟ್ಟೆಗೆ ತೆರಳಿ ಯಾರ ಒತ್ತಡಕ್ಕೂ ಮಣಿಯದೆ ಮತದಾನ ಮಾಡುತ್ತೇನೆ.
ಅಕ್ಷತಾ ಎಲ್., ಮುಳ್ಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net