

ಶ್ರೀರಂಗಪಟ್ಟಣ: ಮೇ.10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆ ಕ್ಷೇತ್ರದ ಎಲ್ಲ 249 ಮತಗಟ್ಟೆಗಳಲ್ಲೂ ಮತದಾನಕ್ಕೆ ಸಂಪೂರ್ಣ ತಯಾರಿ ಕೈಗೊಂಡಿದ್ದು, ಕ್ಷೇತ್ರದ 5 ಸಾಂಪ್ರದಾಯಿಕ ಮತಗಟ್ಟೆ ಕೇಂದ್ರಗಳನ್ನು ವರ್ಣರಂಜಿತವಾಗಿ ಅಲಂಕರಿಸಲಾಗಿದೆ.
ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಮತಗಟ್ಟೆ ಸಂಖ್ಯೆ 136, ದರಸಗುಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 110, ಅರಕೆರೆ ಗ್ರಾಮದ ಮತಗಟ್ಟೆ ಸಂಖ್ಯೆ 151, ಕೆ.ಆರ್. ಸಾಗರದ ಮತಗಟ್ಟೆ ಸಂಖ್ಯೆ 207 ಹಾಗೂ ಹುರುಳಿ ಕ್ಯಾತನಹಳ್ಳಿ ಮತಗಟ್ಟೆ ಸಂಖ್ಯೆ-247 ಇವುಗಳನ್ನು ತೆಂಗಿನ ಗರಿಯ ಚಪ್ಪರದೊಂದಿಗೆ ಹಸಿರು ತೋರಣದ ಜತೆಗೆ ಬಣ್ಣದ ರಂಗೋಲಿ ಹಾಕಿ ಮತಗಟ್ಟೆಯ ಸಿಬ್ಬಂದಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮತದಾನಕ್ಕೆ ಬರುವವರನ್ನು ಸ್ವಾಗತಿಸಲಿದ್ದಾರೆ.
ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಮತಗಟ್ಟೆ ಸಂಖ್ಯೆ-136ಕ್ಕೆ ಮಂಗಳವಾರ ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿ ಶೇಕ್ ತನ್ವೀರ್ ಆಸೀಫ್ ಹಾಗೂ ತಾಲೂಕು ಪಂಚಾಯಿತಿ ಇಒ ವೀಣಾ ರಾಜೇಗೌಡ ಭೇಟಿ ನೀಡಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ಪರಿಶೀಲಿಸಿದರು. ಈ ವೇಳೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಎ. ಪ್ರಶಾಂತ್ ಬಾಬು ಹಾಗೂ ಎಲ್ಲಾ ಬಿಎಲ್‌ಒಗಳು ಹಾಜರಿದ್ದರು.