1408 ಹೊಸ ಮತದಾರರ ಸೇರ್ಪಡೆ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

Dc Press Meet)
Published on

ಮಂಡ್ಯ: ಐದು ದಿನದ ಅಂತರದಲ್ಲಿ ಜಿಲ್ಲೆಯಲ್ಲಿ 1408 ಯುವ ಮತದಾರರನ್ನು ಹೊಸ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇದರೊಂದಿಗೆ ಏ.2ರ ಅಂತ್ಯಕ್ಕೆ 1517302 ಅರ್ಹರು ಮತದಾನದ ಹಕ್ಕನ್ನು ಹೊಂದಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಪ್ರಮಾಣವಾಗಿದೆ. ಆದ್ದರಿಂದ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.

ಮಾ.29ಕ್ಕೆ ಜಿಲ್ಲೆಯಲ್ಲಿ 15,15,894 ಜನರು ಮತದಾನದ ಹಕ್ಕು ಹೊಂದಿದ್ದರು. ನಾಮಪತ್ರ ಸಲ್ಲಿಕೆ ಕಡೆಯ ದಿನಕ್ಕೆ ಇನ್ನೂ ಒಂದು ವಾರವಿದೆ ಎನ್ನುವವರೆವಿಗೂ ಮತದಾರರ ಪಟ್ಟಿಗೆ ಹೊಸ ಮತದಾರರ ಸೇರ್ಪಡೆಗೆ ಅವಕಾಶವಿದೆ. ಅದರಂತೆ 2023ರ ಏ.1ಕ್ಕೆ 18 ವರ್ಷ ಪೂರ್ಣಗೊಂಡಿರುವ ಯುವಜನರು ಏ.11ರೊಳಗೆ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಇನ್ನು ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 37417 ಹಾಗೂ 23118 ಅಂಗವಿಕಲ ಮತದಾರರಿದ್ದಾರೆ. ಇವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿರುವುದರಿಂದ ನಮೂನೆ-12ಡಿ ಅನ್ನು ವಿತರಣೆ ಮಾಡಲಾಗುತ್ತಿದೆ. ಈ ಸಂಬಂಧ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಆದರೂ ಸಾಧ್ಯವಾದಷ್ಟು ಮತಗಟ್ಟೆಗೆ ಬಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ ಅವರು, 2022 ಅ.15ರ ನಂತರ ಹೊಸದಾಗಿ ಸೇರ್ಪಡೆಯಾಗಿರುವ 66,981 ಯುವ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ಒದಗಿಸಬೇಕಿದೆ. ಈ ಪೈಕಿ 21033 ಗುರುತಿನ ಚೀಟಿ ಸರಬರಾಜಾಗಿದ್ದು, ಅಂಚೆ ಮೂಲಕ ವಿತರಿಸಲಾಗುತ್ತಿದೆ. ವಿಳಂಭವಾದರೆ ಮತದಾರರು ತಮ್ಮ ವ್ಯಾಪ್ತಿಯ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು. ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿಯಿಂದ ಏ.13ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸ್ವೀಪ್ ಸಮಿತಿಗೆ ಐಕಾನ್ ಆಗಿರುವ ನಟ ನೀನಾಸಂ ಸತೀಶ್ ಅಂದು ಪಾಲ್ಗೊಳ್ಳಲಿದ್ದಾರೆ ಎಂದರು.

4,99 ಲಕ್ಷ ರೂ ನಗದು ವಶ: ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ದಾಖಲೆ ಇಲ್ಲದ 4,99 ಲಕ್ಷ ರೂ ನಗದು ಹಾಗೂ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 34,58,564 ರೂ ಮೌಲ್ಯದ ಮದ್ಯ, 5.550 ರೂ ಮೌಲ್ಯದ ಡ್ರಗ್ಸ್, 16,98,856 ರೂ ಮೌಲ್ಯದ ಪದಾರ್ಥ ವಶಪಡಿಸಲಾಗಿದೆ. ಈ ಎಲ್ಲದರ ಮೊತ್ತ 56,61,970 ರೂಗಳಾಗಿದೆ. ಚುನಾವಣೆ ಘೋಷಣೆಗೂ ಮುನ್ನ ನಗದು ಸೇರಿದಂತೆ 1,54, 99,082 ರೂ ಮೌಲ್ಯದ ವಸ್ತು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಜಿಲ್ಲಾದ್ಯಂತ 34 ಚೆಕ್‌ಫೋಸ್ಟ್ ನಿರ್ಮಿಸಲಾಗಿದೆ. ಅನಧಿಕೃತ ಹಣ ಹಾಗೂ ಇನ್ನಿತರೆ ಆಮಿಷ ಒಡ್ಡುವಂತಹ ವಸ್ತುಗಳ ಸಾಗಾಣಿಕೆ ಬಗ್ಗೆ ನಿಗಾ ವಹಿಸಲಾಗಿದೆ. ಇದರೊಂದಿಗೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಕೆಲ ದಿನದ ಹಿಂದೆ ಯಾತ್ರೆ ವೇಳೆ ಕಲಾವಿದರಿಗೆ ಹಣ ಎಸೆದ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ದೂರಿಗೆ ಎಫ್‌ಐಆರ್ ಮಾಡಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಐದು ಸಿಐಎಸ್‌ಎಫ್ ಕಂಪನಿಯನ್ನು ನಿಯೋಜಿಸಲಾಗಿದೆ. ಪ್ರತಿ ಕಂಪನಿಯಲ್ಲಿ ನೂರರಂತೆ ಸಿಬ್ಬಂದಿ ಇರಲಿದ್ದಾರೆ ಎಂದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಚ್.ಎಸ್.ನಿರ್ಮಲಾ, ಚುನಾವಣೆ ಶಾಖೆ ಅಧಿಕಾರಿ ದೀಪಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net