

ಮಂಡ್ಯ: ಮತದಾರರಿಗೆ ಆಮಿಷ ಒಡ್ಡಲು ವರ್ತಕರಿಂದ ಒಂದೇ ಬಾರಿ ಹೆಚ್ಚು ವಸ್ತುಗಳನ್ನು ಖರೀದಿಸುವುದು ಮತ್ತು ಸಾಗಾಣಿಕೆ ಮಾಡುವುದು ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ವಿಚಾರಣೆ ನಡೆಸಬೇಕು. ಒಂದು ವೇಳೆ ತಪ್ಪಿತಸ್ಥರು ಎಂದಾದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೆಟ್ರೋಲ್ಬಂಕ್, ರೈಸ್‌ಮಿಲ್, ಹೋಟೆಲ್, ಪ್ರಿಂಟಿಂಗ್ ಪ್ರೆಸ್, ಮದ್ಯ ಮಾರಾಟಗಾರರ ಸನ್ನದುದಾರರ ಸಂಘದ ಮುಖ್ಯಸ್ಥರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ರೀತಿಯಲ್ಲಿ ಕೂಪನ್‌ಗಳನ್ನು ನೀಡಿ ಮತದಾರರಿಗೆ ಬಟ್ಟೆ, ಆಹಾರ ಪದಾರ್ಥ, ಪೆಟ್ರೋಲ್ ಹಾಗೂ ಮತ್ತಿತ್ತರ ವಸ್ತುಗಳನ್ನು ನೀಡುವ ಸಾಧ್ಯತೆ ಇರುತ್ತದೆ. ಇದಕ್ಕೆ ವರ್ತಕರು ಸಹಕರಿಸಬಾರದು. ಜತೆಗೆ ಇಂತಹ ಪ್ರಕರಣಗಳ ಕಂಡು ಬಂದಲ್ಲಿ ದೂರು ಸಲ್ಲಿಸಬೇಕು ಎಂದರು.
ಬ್ಯಾಂಕ್ ಖಾತೆಗಳಲ್ಲಿ ಅನುಮಾನಾಸ್ಪದವಾಗಿ ಹೆಚ್ಚು ಮೊತ್ತದ ಹಣದ ವರ್ಗಾವಣೆ, ಒಂದೇ ಖಾತೆಯಿಂದ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ಖಾತೆಯಿಂದ ದೊಡ್ಡ ಮೊತ್ತದ ನಗದು ಹಣವನ್ನು ತೆಗೆಯುವುದು ಕಂಡುಬಂದಲ್ಲಿ ನಿಗಾವಹಿಸಿ ಪರಿಶೀಲಿಸಿ ವರದಿ ನೀಡುವಂತೆ ಲೀಡ್‌ಬ್ಯಾಂಕ್ ಮ್ಯಾನೇಜರ್‌ಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಎಸ್ಪಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ಅಬಕಾರಿ ಉಪ ಆಯುಕ್ತೆ ಮಹಾದೇವಿಬಾಯಿ ಇತರರಿದ್ದರು.