ವಾಮಮಾರ್ಗದ ಅಧಿಕಾರ ಕಮಲಕ್ಕೆ ಈ ಬಾರಿ ಕಷ್ಟ: ಮಧು ಬಂಗಾರಪ್ಪ

Madhu bangarappa
Published on

ಶಿವಮೊಗ್ಗ: ಬರಲಿರುವ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅತ್ಯಧಿಕ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿ ಶಾಸಕರನ್ನು ಖರೀದಿ ಮಾಡಿ ಮತ್ತೆ ಅಧಿಕಾರ ಹಿಡಿಯಲು ಅವಕಾಶವಿಲ್ಲದಂತೆ ಕಾಂಗ್ರೆಸ್ ಅತ್ಯಧಿಕ ಸ್ಥಾನ ಗಳಿಸಲಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಲಹಳ್ಳಿಯ ತಮ್ಮ ನಿವಾಸದಲ್ಲಿ ಗುರುವಾರ ಜನ್ಮದಿನ ಆಚರಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಬಾರಿಯೂ ಬಿಜೆಪಿ ಹಿಂಬಾಗಿಲಿನಿಂದಲೇ ಅಧಿಕಾರ ಹಿಡಿದಿದೆ. ಆದರೆ ಈ ಬಾರಿ ಅಂತಹ ಸಾಧ್ಯತೆ ಇರುವುದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬಹುಮತ ಸಾಧಿಸಲಿದ್ದೇವೆ ಎಂದರು.

ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂದು ಈಗಲೇ ಹೇಳುವುದಿಲ್ಲ. ಬಿಜೆಪಿಯವರಿಗೆ ಗೊತ್ತಾದರೆ ಈಗಿನಿಂದಲೇ ಶಾಸಕರ ಖರೀದಿಗೆ ಮುಂದಾಗುತ್ತಾರೆ. ಒಟ್ಟಾರೆ ಈ ಬಾರಿ ಶಾಸಕರನ್ನು ಖರೀದಿಗೆ ಅವಕಾಶ ಕೊಡದೇ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರೇ ಹೊರತು ಯಾವ ಭರವಸೆಯನ್ನೂ ಕೊಡಲಿಲ್ಲ. ಜಿಲ್ಲೆಯ ಯಾವ ಸಮಸ್ಯೆಗಳ ಬಗ್ಗೆಯೂ ಮಾತನಾಡಲಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಶಾಪ ಬಿಜೆಪಿ ತಟ್ಟದೆ ಬಿಡುವುದಿಲ್ಲ ಎಂದು ಕಿಡಿಕಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net