ರದ್ದಾಗಲಿದೆ ನೋಟಿನ ಸೀಟು: ಗ್ರಾಮ ಪಂಚಾಯಿತಿಗಳ ಸ್ಥಾನಗಳ ಹರಾಜಿಗೆ ಆಯೋಗ ಅಂಕುಶ

Gramayana Logo
Published on

ಬೆಂಗಳೂರು: ಓಟಿಗಾಗಿ ನೋಟು ಎಂಬ ಪರಿಸ್ಥಿತಿ ಗ್ರಾಮ ಪಂಚಾಯಿತಿ ಸಂದರ್ಭದಲ್ಲಿ ನೋಟಿಗಾಗಿ ಸೀಟು ಎಂಬಂತೆ ಬದಲಾಗಿದ್ದು, ಗ್ರಾಮ ಪಂಚಾಯಿತಿ ಸ್ಥಾನಗಳು ಹರಾಜು ಆಗುತ್ತಿರುವ ಬಗ್ಗೆ ಆಕ್ರೋಶಗೊಂಡಿರುವ ರಾಜ್ಯ ಚುನಾವಣಾ ಆಯೋಗ, ಇಂತಹ ಹರಾಜು ಆಗಿರುವ ಸ್ಥಾನಗಳನ್ನು ರದ್ದು ಮಾಡಿ ಚುನಾವಣೆ ನಡೆಸಲು ನಿರ್ಧರಿಸಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸದಸ್ಯ ಸ್ಥಾನಗಳ ಹರಾಜು ನಡೆದಿದ್ದು, ಇಂತಹ ಕಡೆಗಳಲ್ಲಿ ರದ್ದು ಮಾಡಿ ಹೊಸದಾಗಿ ಚುನಾವಣಾ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ಹರಾಜಿನಲ್ಲಿ ಅವಿರೋಧ ಆಯ್ಕೆಯಾಗಿದ್ದ ಕಡೆ ಚುನಾವಣೆ ನಡೆಸಿದ ಉದಾಹಣೆ ಇರುವುದರಿಂದ ಅದೇ ಕ್ರಮ ಅನುಸರಿಸಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.

ಎಚ್ಚರಿಕೆ ನಡುವೆಯೂ ಹರಾಜು?

ಹಾವೇರಿ: ಜಿಲ್ಲೆಯ ಬುರಡಿಕಟ್ಟಿ ಗ್ರಾಮದಲ್ಲಿ 3 ಸದಸ್ಯ ಸ್ಥಾನಗಳಿದ್ದು, ಇಲ್ಲಿ ಈ ಹಿಂದೆ ಆಯ್ಕೆಯಾಗಿದ್ದವರೇ ಮತ್ತೆ ಆಯ್ಕೆ ಬಯಸಿದ್ದು, ಗ್ರಾಮದ ಹಿರಿಯರನ್ನು ಪುಸಲಾಯಿಸಿ ದೇವಸ್ಥಾನ ಅಭಿವೃದ್ಧಿಗೆ ಹಣ ನೀಡುವ ಆಮಿಷ ಒಡ್ಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಆದರೂ ಇದನ್ನು ಲೆಕ್ಕಿಸದೇ ಇದೇ ಗ್ರಾಮದ ಮತ್ತೆ ಕೆಲವರು ಸ್ಪರ್ಧೆಗೆ ಇಳಿಯಲು ಕಸರತ್ತು ನಡೆಸಿದ್ದಾರೆ.

27 ವರ್ಷಗಳಿಂದ ಎಲೆಕ್ಷನ್ ನಡೆದಿಲ್ಲ

ಸಿಂಧನೂರು(ರಾಯಚೂರು): ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಪಂಗೆ 27 ವರ್ಷಗಳಿಂದ ಸದಸ್ಯರ ಅವಿರೋಧ ಆಯ್ಕೆ ನಡೆಯುತ್ತಿದ್ದು, ಈ ವರ್ಷವೂ ಇದೇ ಸಂಪ್ರದಾಯ ಮುಂದುವರಿಯಲಿದೆ. 25 ಸದಸ್ಯ ಬಲದ ಈ ಗ್ರಾಪಂ ಅಸ್ತಿತ್ವಕ್ಕೆ ಬಂದಿದ್ದು 1993ರಲ್ಲಿ. ಅಂದಿನಿಂದ ಹಿಡಿದು ಈ ವರೆಗೆ ಸದಸ್ಯರು, ಉಪಾಧ್ಯಕ್ಷರು, ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತ ಬರಲಾಗಿದೆ.

ಪ್ರಧಾನಿ ಮೋದಿಗೆ ದೂರು

ಕುಮಟಾ: ಗ್ರಾಮ ಪಂಚಾಯಿತಿ ಚುನಾವಣೆಗೆ ಉದ್ದೇಶಪೂರ್ವಕ ಮೀಸಲಾತಿ ಬದಲಾಯಿಸಲಾಗಿದೆ. ಇದರಿಂದಾಗಿ ಸ್ಪರ್ಧಿಸುವ ಅವಕಾಶದಿಂದ ವಂಚಿತನಾಗಿದ್ದೇನೆ ಎಂದು ತಾಲೂಕಿನ ಹೊಲನಗದ್ದೆ ಪಂಚಾಯಿತಿ ಹಣ್ಣೆಮಠ ವಾರ್ಡ್​ನ (ಮತಗಟ್ಟೆ ಸಂಖ್ಯೆ 59) ಆಕಾಂಕ್ಷಿ ಸುಬ್ರಹ್ಮಣ್ಯ ಭಟ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೂರಿದ್ದಾರೆ.

42 ಜನರ ವಿರುದ್ಧ ಪ್ರಕರಣ

ನಾಗಮಂಗಲ: ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಗ್ರಾಪಂನ ಮೂರು ಸದಸ್ಯ ಸ್ಥಾನಕ್ಕೆ ಬಹಿರಂಗವಾಗಿ ಹರಾಜು ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 42 ಜನರ ವಿರುದ್ಧ ಬೆಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರಾಜು ಕೂಗಿ ಆಯ್ಕೆ ಮಾಡಿದ್ದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net