

ಮಡಿಕೇರಿ: ಭಾರತ ಚುನಾವಣಾ ಆಯೋಗವು ವಿಧಾನಸಭಾ ಸಾರ್ವತ್ರಿಕ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದು, ಆ ನಿಟ್ಟಿನಲ್ಲಿ ಮಾ.೨೯ ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.
ನಗರದ ಜಿಲ್ಲಾಧಿಕಾರಿರವರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು, ವಿಧಾನಸಭಾ ಚುನಾವಣೆಯು ಮೇ.೧೦ ರಂದು ಮತದಾನ ನಡೆಯಲಿದೆ. ಮೇ.೧೩ ರಂದು ಮತ ಎಣಿಕೆ ನಡೆಯಲಿದೆ. ಏ.೧೩ ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಏ.೨೦ ಕೊನೆಯ ದಿನವಾಗಿದೆ. ಏ.೨೧ ರಂದು ನಾಮಪತ್ರ ಪರಿಶೀಲನಾ ಕಾರ್ಯ, ಏ.೨೪ ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ ಎಂದು ಡಾ.ಬಿ.ಸಿ.ಸತೀಶ ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ವಿವಿಧ ತಂಡಗಳನ್ನು ನೇಮಕ ಮಾಡಲಾಗಿದೆ. ಎಂಸಿಸಿ ಇಬ್ಬರು ನೋಡಲ್ ಅಧಿಕಾರಿಗಳು, ೪೧ ಸೆಕ್ಟರ್ ಅಧಿಕಾರಿಗಳು, ೧೪ ಪ್ಲೈಯಿಂಗ್ ಸ್ಕ್ವಾಡ್, ೪೨ ಸ್ಟಾಟಿಕ್ ಸರ್ವೆಲೆನ್ಸ್ ತಂಡ ರಚಿಸಲಾಗಿದೆ ಎಂದು ಡಾ.ಬಿ.ಸಿ.ಸತೀಶ ವಿವರಿಸಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ೪೦ ಲಕ್ಷ ರೂ. ವರೆಗೆ ಖರ್ಚು ಮಾಡಬಹುದಾಗಿದೆ. ಈ ಹಿನ್ನೆಲೆ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ವಹಿಸಲು ವಿವಿಧ ವೆಚ್ಚ ತಂಡಗಳನ್ನು ನೇಮಕ ಮಾಡಲಾಗಿದೆ. ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಬ್ಬರಂತೆ ಇಬ್ಬರು ಸಹಾಯಕ ವೆಚ್ಚ ವೀಕ್ಷಕರು, ಇಬ್ಬರು ಲೆಕ್ಕ ತಂಡದವರು, ನಾಲ್ಕು ವೀಡಿಯೋ ಸರ್ವಿಲೆನ್ಸ್ ತಂಡ, ಹಾಗೆಯೇ ಇಬ್ಬರು ವಿಡಿಯೋ ವಿವಿಂಗ್ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಒಬ್ಬ ವ್ಯಕ್ತಿ ೫೦ ಸಾವಿರ ಮೊತ್ತ ತೆಗೆದುಕೊಂಡು ತೆರಳಬಹುದು. ಆದರೆ ಪೂರಕ ದಾಖಲೆ ಇಟ್ಟುಕೊಂಡಿರಬೇಕು. ತಪ್ಪಿದ್ದಲ್ಲಿ ತಪಾಸಣಾ ಅವಧಿಯಲ್ಲಿ ಮುಟ್ಟುಗೋಲು ಹಾಕಲಾಗುತ್ತದೆ. ೫೦ ಸಾವಿರಕ್ಕಿಂತ ಹೆಚ್ಚು ಮೊತ್ತವನ್ನು ದಾಖಲೆಯೊಂದಿಗೆ ಇಟ್ಟುಕೊಂಡು ತೆರಳಿದ ಸಂದರ್ಭ ತಪಾಸಣಾ ಅವಧಿಯಲ್ಲಿ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಮೊತ್ತವನ್ನು ಮುಟ್ಟುಗೋಲು ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ವಾಹನಗಳಲ್ಲಿ ೧೦ ಲಕ್ಷಕ್ಕಿಂತ ಹೆಚ್ಚು ನಗದು ಇರುವುದು ತಪಾಸಣಾ ಅವಧಿಯಲ್ಲಿ ಕಂಡುಬಂದಲ್ಲಿ ಈ ಮೊತ್ತವನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡಲಾಗುವುದು. ವಾಹನಗಳಲ್ಲಿ ಅನುಮಾನಾಸ್ಪದ ಸಾಮಗ್ರಿಗಳಾದ ಗೃಹ ಉಪಯೋಗಿ ವಸ್ತುಗಳು, ಮದ್ಯ, ಮಾದಕ ದ್ರವ್ಯಗಳು ಮತ್ತು ಆಯುಧಗಳನ್ನು ಸಾಗಿಸುವುದು ತಪಾಸಣಾ ಅವಧಿಯಲ್ಲಿ ಕಂಡುಬಂದಲ್ಲಿ ಈ ವಸ್ತುಗಳನ್ನು ಮುಟ್ಟುಗೋಲು ಮಾಡಲಾಗುವುದು ಎಂದು ಡಾ.ಬಿ.ಸಿ.ಸತೀಶ ಹೇಳಿದರು.
ಜಿಲ್ಲೆಯಲ್ಲಿ ಒಟ್ಟು ೫೪೨ ಮತಗಟ್ಟೆಗಳಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೨೬೯ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೭೩ ಮತಗಟ್ಟೆಗಳು ಇವೆ. ಕೊಡಗು ಜಿಲ್ಲೆಯಲ್ಲಿ ಒಟ್ಟು ೪,೫೨,೬೪೨ ಮತದಾರರಿದ್ದು, ೪,೫೧,೨೧೬ ಸಾಮಾನ್ಯ ಮತದಾರರು ಮತ್ತು ೧,೪೨೬ ಸೇವಾ ಮತದಾರರು ಇದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨,೩೦,೩೫೯ ಮತದಾರರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨,೨೨,೨೮೩ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಕುಟ್ಟ, ಮಾಕುಟ,್ಟ ಕರಿಕೆ ಸೇರಿ ೩ ಅಂತರ ರಾಜ್ಯ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಹಾಗೆಯೇ ೧೧ ಅಂತರ್ ಜಿಲ್ಲಾ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗುತ್ತದೆ. ಶಾಂತಿಯುತ ಚುನಾವಣೆಗೆ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕ್ರಮವಹಿಸಲಾಗಿದೆ ಎಂದರು.
ಸ್ವೀಪ್ ಹಾಗೂ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಡಾ.ಎಸ್.ಆಕಾಶ್ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಶಿಕ್ಷಣ ಮತ್ತು ಜಾಗೃತಿ ಸಮಿತಿ ವತಿಯಿಂದ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಡಿಮೆ ಮತದಾನವಾಗಿದ್ದ ೬೫ ಮತಗಟ್ಟೆಗಳಲ್ಲಿ ಹೆಚ್ಚಿನ ಮತದಾನಕ್ಕೆ ಶ್ರಮಿಸಲಾಗಿದೆ. ವೋಟರ್ ಹೆಲ್ಫ್‌ಲೈನ್ ಆ್ಯಪ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಬಹುದಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಅಬಕಾರಿ ಇಲಾಖೆಯ ಜಿಲ್ಲಾ ಆಯುಕ್ತರಾದ ಜಗದೀಶ್, ಇತರರು ಇದ್ದರು.
ಅಧಿಕಾರಿಗಳ ನೇಮಕ
ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್‌ರವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್‌ರಾದ ಕಿರಣ್ ಜಿ.ಗೌರಯ್ಯ(ಮಡಿಕೇರಿ), ಎಸ್.ಎನ್.ನರಗುಂದ(ಸೋಮವಾರಪೇಟೆ), ಟಿ.ಎಂ.ಪ್ರಕಾಶ್(ಕುಶಾಲನಗರ), ಕಾರ್ಯನಿರ್ವಹಿಸಲಿದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್‌ರವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸಹಾಯಕ ಚುನಾವಣಾಧಿಕಾರಿಯಾಗಿ ಕಿರಣ್ ಜಿ.ಗೌರಯ್ಯ(ಮಡಿಕೇರಿ), ಎಚ್.ಎನ್.ರಾಮಚಂದ್ರ(ವಿರಾಜಪೇಟೆ), ಎಸ್.ಎನ್.ಪ್ರಶಾಂತ್(ಪೊನ್ನಂಪೇಟೆ) ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮತದಾರರ ಸಹಾಯವಾಣಿ
ಚುನಾವಣೆಯ ಅಕ್ರಮ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಮತಗಟ್ಟೆ ಬಗ್ಗೆ ಮಾಹಿತಿ ಪಡೆಯಲು ಹಾಗೂ ಇತರೆ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು/ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಜಿಲ್ಲಾಧಿಕಾರಿರವರ ಕಚೇರಿಯಲ್ಲಿ ಟೋಲ್ ಫ್ರೀ ಸಂಖ್ಯೆ ೧೯೫೦ ಕರೆ ಮಾಡಬಹುದಾಗಿದೆ. ವೋಟರ್ ಸಹಾಯವಾಣಿಯು ೨೪*೭ ಕಾರ್ಯನಿರ್ವಹಿಸುವುದು. ಹೊರ ಜಿಲ್ಲೆಯಿಂದ ಕರೆ ಮಾಡುವವರು ೦೮೨೭೨-೧೯೫೦ಗೆ ಕರೆ ಮಾಡುವುದು ಎಂದರು.
ಖಾಸಗಿ ಸಮಾರಂಭಗಳಿಗೆ ನಿರ್ಬಂಧವಿಲ್ಲ
ನಿಶ್ಚಿತಾರ್ಥ, ಮದುವೆ, ನಾಮಕರಣ ಮತ್ತಿತರ ಖಾಸಗಿ ಸಮಾರಂಭಗಳಿಗೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಸಮಾರಂಭಗಳು ರಾಜಕೀಯ ಪ್ರೇರಿತವಾಗಿರಬಾರದು. ಯಾವುದೇ ಪಕ್ಷದ ಪ್ರಚಾರಕ್ಕೆ ವೇದಿಕೆಯಾಗಿರಬಾರದು. ಮೆರವಣಿಗೆ, ವಾರ್ಷಿಕೋತ್ಸವ, ಜಾತ್ರೆ, ಸಾಮೂಹಿಕ ವಿವಾಹ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ. ಚುನಾವಣಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆದು ೨೪ ಗಂಟೆಯೊಳಗೆ ಅನುಮತಿ ನೀಡಲಿದ್ದಾರೆ ಜಿಲ್ಲಾಧಿಕಾರಿ ತಿಳಿಸಿದರು.