ತಿಪಟೂರಲ್ಲಿ ಚುನಾವಣೆ ರಂಗು; ಜೆಡಿಎಸ್‌ನಲ್ಲಿ ಉತ್ಸಾಹವೇ ಮರೆ ಹೋರಾಟಕ್ಕೆ ಅಣಿಯಾಗುತ್ತಿದೆ ಕಾಂಗ್ರೆಸ್

Tiptur Taluk Beligere Grama Panchayath office. (1)
Published on

ತಿಪಟೂರು: ಕಲ್ಪತರು ನಾಡಲ್ಲಿ ಗ್ರಾಪಂ ಚುನಾವಣೆ ರಂಗೇರಿದೆ. ಬಿಜೆಪಿಯಲ್ಲಿ ರಣೋತ್ಸಾಹ ಕಾಣುತ್ತಿದ್ದರೆ, ಕಾಂಗ್ರೆಸ್ ಹೋರಾಟಕ್ಕೆ ಅಣಿಯಾಗುತ್ತಿದೆ. ಇನ್ನೂ ಅನಾಥ ಮನೆಯಂತಿರುವ ಜೆಡಿಎಸ್‌ನಲ್ಲಿ ಚುನಾವಣಾ ಉತ್ಸಾಹವೇ ಮರೆಯಾಗಿದೆ. ಗ್ರಾಮ ಸ್ವರಾಜ್ ಸಮಾವೇಶ ಏರ್ಪಡಿಸುವ ಮೂಲಕ ಗ್ರಾಪಂ ಹೋರಾಟಕ್ಕೆ ಬಿಜೆಪಿ ತನ್ನ ಕಾರ್ಯಕರ್ತರಲ್ಲಿ ಹುರುಪು ತುಂಬಿದೆ. ಕಾಂಗ್ರೆಸ್‌ಗೆ ಮಾಜಿ ಸಚಿವ, ಸಹಕಾರಿ ಧುರೀಣ ಕೆ.ಷಡಕ್ಷರಿ ಶಕ್ತಿ ಎನಿಸಿದ್ದಾರೆ.

ತಾಲೂಕಿನ ಒಟ್ಟು 26 ಗ್ರಾಪಂಗಳ ಪೈಕಿ ಬಲುವನೇರಲು, ಹಾಲ್ಕುರಿಕೆ, ಹೊನ್ನವಳ್ಳಿ, ಕುಪ್ಪಾಳು, ಅರಳಗುಪ್ಪೆ, ಈಚನೂರು, ಮತ್ತಿಹಳ್ಳಿ, ಗುರುಗದಹಳ್ಳಿ, ತಡಸೂರು, ರಂಗಾಪುರ ಸೇರಿ ಒಟ್ಟು 10 ಗ್ರಾಪಂಗಳನ್ನು ತನ್ನದಾಗಿಸಿಕೊಂಡಿದ್ದ ಬಿಜೆಪಿ ಈ ಬಾರಿ ಕನಿಷ್ಠ 20 ಗ್ರಾಪಂಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ದು, ಮಂಡಲ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಿಸಿ, ಯಾವುದೇ ಗೊಂದಲಗಳಿಲ್ಲದೆ ಸರ್ವ ಸಮ್ಮತ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದೆ. ಪಕ್ಷ ನಿಷ್ಠ ಕಾರ್ಯಕರ್ತರೊಂದಿಗೆ ಮುಖಂಡರಿದ್ದೇವೆ ಎಂಬ ಅಭಯ ನೀಡಿದೆ. ಶಾಸಕ ಬಿ.ಸಿ.ನಾಗೇಶ್‌ಗೆ ಗ್ರಾಪಂ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಕಳೆದ ಚುನಾವಣೆಯಲ್ಲಿ ಹಿಂಡಿಸ್ಕೆರೆ, ಬಿಳಿಗೆರೆ, ಮಣಕಿಕೆರೆ, ಹುಚ್ಚಗೊಂಡನಹಳ್ಳಿ, ಗ್ಯಾರಘಟ್ಟ, ಸಾರ್ಥವಳ್ಳಿ, ದಸರೀಘಟ್ಟ, ನೊಣವಿನಕೆರೆ, ಗುಡಿಗೊಂಡನಹಳ್ಳಿ. ನಾಗರಘಟ್ಟ, ಮಸವನಘಟ್ಟ, ನೆಲ್ಲಿಕೆರೆ, ಗುಂಗುರಮಳೆ ಸೇರಿ ಒಟ್ಟು 13 ಕ್ಷೇತ್ರಗಳಲ್ಲಿ ಸಂಪೂರ್ಣ ಬಹುಮತ ಮತ್ತು ಬಜಗೂರು, ಹುಣಸೇಘಟ್ಟ, ಮತ್ತು ಕರಡಿ ಗ್ರಾಮ ಪಂಚಾಯಿತಿಗಳಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಒಟ್ಟು 16 ಗ್ರಾಪಂಗಳನ್ನು ತನ್ನದಾಗಿಸಿಕೊಂಡಿದ್ದ ಕಾಂಗ್ರೆಸ್, ಈ ಬಾರಿ ಅದಕ್ಕಿಂತ ಹೆಚ್ಚು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಸೂಕ್ತ ಅಭ್ಯರ್ಥಿಗಳನ್ನು ಸ್ಥಳೀಯ ಮುಖಂಡರು ಆಯ್ಕೆ ಮಾಡಿದ್ದು ಗೊಂದಲಗಳಿದ್ದರೆ ಮಾಜಿ ಶಾಸಕ ಕೆ. ಷಡಕ್ಷರಿ ಬಗೆಹರಿಸಿ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡುವ ಭರವಸೆಯನ್ನು ಕಾರ್ಯಕರ್ತರಿಗೆ ಕೊಟ್ಟಿದ್ದಾರೆ.

ಜೆಡಿಎಸ್‌ಗೆ ತಾಲೂಕಿನಲ್ಲಿ ಭದ್ರನೆಲೆ ಇದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರಿಗೆ 63 ಸಾವಿರ ಮತಗಳು ಬಂದಿದ್ದವು. ಜೆಡಿಎಸ್ ಶಕ್ತಿಗೆ ಇದು ಸಾಕ್ಷಿ. ಆದರೀಗ ಜೆಡಿಎಸ್ ಪಕ್ಷ ಮುನ್ನಡೆಸುವ ನಾಯಕನೇ ಇಲ್ಲದಾಗಿದೆ. ಮೊನ್ನೆ ತಾಲೂಕು ಘಟಕದ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ನಾವಿಕನಿಲ್ಲದ ದೋಣಿ ಹತ್ತಲ್ಲ. ಯಾರ ಮುಂದಾಳತ್ವದಲ್ಲಿ ಚುನಾವಣೆಗೆ ಹೋಗಬೇಕೆಂಬ ಅಸಮಾಧಾನದೊಂದಿಗೆ ಕೆಲ ಕಾರ್ಯಕರ್ತರು ಸಭೆಯಿಂದ ಹೊರ ನಡೆದಿದ್ದು, ತಾಲೂಕಿನಲ್ಲಿ ಜೆಡಿಎಸ್ ಸ್ಥಿತಿ ಅಂಬಿಗನಿಲ್ಲದ ದೋಣಿಯಂತಾಗಿದೆ. ಕೇಂದ್ರದಿಂದ ಪ್ರತೀ ಗ್ರಾಪಂಗೆ ಕನಿಷ್ಠ ಒಂದೂವರೆ ಕೋಟಿ ಅನುದಾನ ನೇರವಾಗಿ ಬರಲಿದೆ. ಪ್ರತಿ ಸದಸ್ಯರು ತಮ್ಮ ವ್ಯಾಪ್ತಿಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ಗಟ್ಟಿಗೊಳ್ಳಲು, ಇದಕ್ಕಿಂತ ಹೆಚ್ಚಿನ ಅವಕಾಶ ಎಂದಿಗೂ ಸಿಗಲ್ಲವೆಂಬ ಬಿಜೆಪಿ ನಾಯಕರ ಭರವಸೆೆ ಕೆಲವರ ನಿದ್ದೆ ಗೆಡಿಸಿದ್ದು ಶತಾಯಗತಾಯ ತಾವು ಗೆಲ್ಲಲೇಬೇಕೆಂಬ ಹುಮ್ಮಸ್ಸಿನಲ್ಲಿ ಅಭ್ಯರ್ಥಿಗಳಿದ್ದಾರೆ.

ಗೆದ್ದವರು ನಮ್ಮವರೇ ಎಂದು ಹೇಳುವ ಪರಿಪಾಠ ಹಿಂದಿನಿಂದಲೂ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್ ಗ್ರಾಪಂ ಗೆಲುವನ್ನು ಸವಾಲಾಗಿ ಸ್ವೀಕರಿಸಿರುವುದರಿಂದ ಈ ಬಾರಿ ಗೆದ್ದವರಿಗೆ ಹೆಚ್ಚಿನ ‘ಮನ್ನಣೆ’ ಸಿಗುವುದರಲ್ಲಿ ಸಂಶಯವಿಲ್ಲ.

ಲೋಕೇಶ್ವರ್ ಕಡೆಗಣನೆ: ಕೆಜೆಪಿ, ಜೆಡಿಎಸ್ ಈಗ ಬಿಜೆಪಿಯಲ್ಲಿ ನೆಲೆಕಂಡುಕೊಂಡಿರುವ ಪೊಲೀಸ್ ಮಾಜಿ ಅಧಿಕಾರಿ ಲೋಕೇಶ್ವರ್ ಶಕ್ತಿ ಏನೆಂಬುದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಗ್ರಾಮಸ್ವರಾಜ್ ಸಮಾವೇಶದಲ್ಲಿ ವೇದಿಕೆಗೂ ಕರೆಯದೇ ಇದ್ದುದು ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದ ಹಿತದೃಷ್ಟಿಯಿಂದ ಲೋಕೇಶ್ವರ್ ತಮ್ಮೊಳಗಿನ ಅಸಮಾಧಾನ ಮರೆತು ನಾಗೇಶ್ ಜತೆ ಬೆರೆತರೆ, ಬಿಜೆಪಿ ಬಲ ಹೆಚ್ಚುವುದರಲ್ಲಿ ಸಂಶಯವಿಲ್ಲ ಎನ್ನಲಾಗಿದೆ.

419 ಸ್ಥಾನಗಳಿಗೆ ಚುನಾವಣೆ: ತಿಪಟೂರು ತಾಲೂಕಿನ 26 ಗ್ರಾಮ ಪಂಚಾಯಿತಿಗಳ 419 ಸ್ಥಾನಗಳಿಗೆ ನಡೆಯುವ ಚುನಾವಣೆಗೆ 68,072 ಪುರುಷ ಹಾಗೂ 70,937 ಮಹಿಳೆಯರು ಮತ ಚಲಾಯಿಸಲಿದ್ದು, ಡಿ.15ರಂದು ಬಿಡುಗಡೆ ಆಗಲಿರುವ ಪೂರಕ ಪಟ್ಟಿ 4 ಮತ್ತು 5ರ ಲೆಕ್ಕದಲ್ಲಿ ಅಂದಾಜು 1 ಸಾವಿರ ಮತದಾರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಅಭಿವೃದ್ಧಿ ಹಾಗೂ ಶುದ್ಧವಾದ ಗ್ರಾಪಂ ನೀಡುವ ನಿಟ್ಟಿನಲ್ಲಿ ಅನುಭವಿ ಹಾಗೂ ಯುವಕರಿಗೆ ಆದ್ಯತೆ ನೀಡಲಾಗುವುದು. ನಮ್ಮ ಪಕ್ಷದ ಸರ್ಕಾರ ಇರುವುದರಿಂದ ಹೆಚ್ಚಿನ ಸ್ಥಾನಗಳನ್ನು ಜಯಿಸಿ ಗ್ರಾಪಂಗಳನ್ನು ವಶಪಡಿಸಿಕೊಳ್ಳಲಾಗುವುದು. ಬಿ.ಸಿ.ನಾಗೇಶ್ ಶಾಸಕ, ತಿಪಟೂರು 18-20 ಪಂಚಾಯಿತಿ ಗೆಲ್ಲಲಿದ್ದೇವೆ. ಪ್ರತೀ ಗ್ರಾಪಂ ನಿಗಾಕ್ಕೆ ಐವರು, ಹಾಗೂ 26 ಗ್ರಾಪಂಗಳ ಉಸ್ತುವಾರಿಗೆ ನಾಲ್ವರು ಮುಖಂಡರನ್ನು ನೇಮಿಸಲಾಗಿದೆ. 40 ವರ್ಷಗಳ ಅನುಭವ ಇದೆ. ಸ್ಪರ್ಧಿಗಳ ಕುಟುಂಬದ ಪರಿಚಯ ಚೆನ್ನಾಗಿದ್ದು ಸೂಕ್ತ ಅಭ್ಯರ್ಥಿಯ ಆಯ್ಕೆ ನಮಗೇನೂ ಕಷ್ಟವಲ್ಲ. ಸಣ್ಣ, ಪುಟ್ಟ ಸಮಸ್ಯೆ ಇದ್ದರೆ ಕಾರ್ಯಕರ್ತರೊಂದಿಗೆ ಸಭೆಯಲ್ಲಿ ಬಗೆಹರಿಸಲಾಗುವುದು. ಕೆ.ಷಡಕ್ಷರಿ ಮಾಜಿ ಶಾಸಕ, ತಿಪಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net