

ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಏ.13ರಂದು ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಪಾಲ್ಗೊಳ್ಳುವಿಕೆ(ಸ್ವೀಪ್) ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಕ್ ತನ್ವೀರ್ ಆಸಿಫ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮತದಾನ ಮಾಡುವ ಹಾಗೂ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾ ಸ್ವೀಪ್ ಐಕಾನ್ ನಟ ನೀನಾಸಂ ಸತೀಶ್ ಅವರನ್ನು ಆಹ್ವಾನಿಸಿ ಗೌರವಿಸಲಾಗುವುದು. ಮಂಡ್ಯ ವಿಶ್ವವಿದ್ಯಾಲಯ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿ, ಫೋಸ್ಟರ್ ಸ್ಪರ್ಧೆ ವಿಜೇತ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸುವರು ಎಂದರು.
ಕಾಲೇಜು ವಿದ್ಯಾರ್ಥಿಗಳಿಗೆ ಮತದಾನ ಮಾಡಲು ಉತ್ತೇಜಿಸುವ ದೃಷ್ಟಿಯಿಂದ 6 ಸೆಲ್ಫಿ ಪಾಯಿಂಟ್‌ಗಳನ್ನು ಇಡಲಾಗುವುದು. ಇಲ್ಲಿ ಮತದಾನ ಜಾಗೃತಿ ವಾಕ್ಯಗಳನ್ನು ರಚಿಸಲಾಗುವುದು. ಕಡಿಮೆ ಮತದಾನವಾಗಿರುವ ನಗರದ ಮತಗಟ್ಟೆ ಗುರುತಿಸಿ ಮಾದರಿ ಮತಗಟ್ಟೆ ಮಾಡಲಾಗುವುದು. ಆ ಸ್ಥಳದಲ್ಲಿ ಜಾಗೃತಿ ಜಾಥಾ ಕೂಡ ಹಮ್ಮಿಕೊಳ್ಳಲಾಗುವುದು. ಇನ್ನು ಮೊದಲ ಬಾರಿಗೆ ಮತದಾನ ಮಾಡುವ ಯುವಕರಿಂದ 30 ಸೆಕೆಂಡ್‌ಗಳ ಮತದಾನದ ಮಹತ್ವ ಕುರಿತು ವಿಡಿಯೋ ತುಣುಕುಗಳನ್ನು ಸಿದ್ಧಪಡಿಸಿ ಅವುಗಳಲ್ಲಿ ಉತ್ತಮವಾಗಿರುವುದನ್ನು ಜಾಗೃತಿಗೆ ಉಪಯೋಗಿಸಿ ಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು, ಮಂಡ್ಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ನಾಗರಾಜು ಜಿ.ಚೋಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಡಿಡಿಪಿಯು ಉಮೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಎಚ್.ಎಸ್.ನಿರ್ಮಲಾ ಇತರರಿದ್ದರು.