ಮೋದಿಯಿಂದ ಮಹಿಳಾ ಸಬಲೀಕರಣ

sudakar k
ಚುನಾವಣಾ ಪ್ರಚಾರ
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾದ ಮಹಿಳಾ ಸಬಲೀಕರಣ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಕೇವಲ ಕೈಗೆ 2 ಸಾವಿರ ರೂಪಾಯಿ ನೀಡಿರುವುದನ್ನು ಬಿಟ್ಟರೆ ಮತ್ತೇನೂ ಮಾಡಿಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದರೆ 2 ಸಾವಿರ ರೂಪಾಯಿ ಎನ್ನುತ್ತಾರೆ. ಆದರೆ ಕರೊನಾ ಅವಧಿಯಿಂದ ಆರಂಭವಾಗಿ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡಿದೆ. ಮುಂದಿನ ಐದು ವರ್ಷವೂ ಈ ಯೋಜನೆ ಮುಂದುವರಿಸುವುದಾಗಿ ಬಿಜೆಪಿ ತಿಳಿಸಿದೆ. ಇದೇ ಬಿಜೆಪಿ ಸರ್ಕಾರ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇ.33ಮಹಿಳಾ ಮೀಸಲಾತಿ ತಂದಿರುವುದರಿಂದ ಮಹಿಳೆಯ ರಾಜಕೀಯ ಸಬಲೀಕರಣ ಸಾಧ್ಯವಾಗಲಿದೆ. ಮಹಿಳೆಯರು ಉದ್ಯಮಿಗಳಾಗಿ ಬೆಳೆಯಲು ಮುದ್ರಾ ಯೋಜನೆಯಡಿ 20 ಲಕ್ಷ ರೂಪಾಯಿ ಸಾಲ ನೀಡಲಾಗುತ್ತದೆ. ಇದು ನಿಜವಾದ ಸಬಲೀಕರಣವೇ ಹೊರತು ಕೈಗೆ ಹಣ ನೀಡುವುದಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಜನ ಔಷಧ ಮಳಿಗೆಗಳನ್ನು ನೀಡಿದ್ದು, ಶೇ.40-50ರಿಯಾಯಿತಿ ದರದಲ್ಲಿ ಔಷಧ ದೊರೆಯುತ್ತಿದೆ. ಇನ್ನು ಮುಂದೆ ಪ್ರಮುಖ ಔಷಧಗಳನ್ನು ಶೇ.90 ರಿಯಾಯಿತಿ ದರದಲ್ಲಿ ನೀಡುವುದಾಗಿ ತಿಳಿಸಲಾಗಿದೆ. ಬಡವರಿಗೆ 3 ಕೋಟಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. 11 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ನೀಡಿದ್ದು, ಇದನ್ನೂ ಮುಂದುವರಿಸಲಾಗುವುದು. ಆದರೆ ಕಾಂಗ್ರೆಸ್ ಸಣ್ಣ ಆಸೆ ತೋರಿಸಿ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದೆ ಎಂದರು.

ಕಾಂಗ್ರೆಸ್ ಎಲ್ಲವನ್ನೂ ಕಿತ್ತುಕೊಂಡಿದೆ ಕರೊನಾ ಬಂದಾಗ ನಾನು ಆರೋಗ್ಯ ಸಚಿವನಾಗಿ ಜನರಿಗೆ ಲಸಿಕೆ ನೀಡಿದ್ದೆ. ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಳ ಮಾಡಿಸಿದ್ದೆ. ಆದರೆ ಈ ಸರ್ಕಾರ ಹಾಲಿನ ಪ್ರೋತ್ಸಾಹಧನ, ಕಿಸಾನ್ ಸಮ್ಮಾನ್, ಹಾಲು ಒಕ್ಕೂಟ ಎಲ್ಲವನ್ನೂ ಕಿತ್ತುಕೊಂಡಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೇಳಿಬರುತ್ತದೆ. ಇಂತಹವರು ಸರ್ಕಾರ ಮಾಡಬೇಕಾ ಎಂದು ಡಾ.ಕೆ.ಸುಧಾಕರ್ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಇಡೀ ಜಗತ್ತಿನ ಮೆಚ್ಚುಗೆ ಗಳಿಸಿ ವಿಶ್ವ ನಾಯಕರಾಗಿ ಬೆಳೆದಿದ್ದಾರೆ. ಜಗತ್ತಿನ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಭಾರತ 5 ನೇ ಸ್ಥಾನಕ್ಕೆ ಬಂದಿದ್ದು, ಮುಂದಿನ ವರ್ಷಗಳಲ್ಲಿ ಜಪಾನ್ ಮೊದಲಾದ ದೇಶಗಳನ್ನು ಹಿಂದಕ್ಕೆ ತಳ್ಳಿ ಮುಂದಕ್ಕೆ ಸಾಗಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net