ಸಕ್ಕರೆನಾಡಲ್ಲಿ ಕಮಲಕ್ಕೆ ಒಳೇಟಿನ ಆತಂಕ: ಏಳು ಕ್ಷೇತ್ರಕ್ಕೆ ಅಭ್ಯರ್ಥಿಗಳು ಅಂತಿಮ

Bjp Halchal)
Published on

ಮಂಡ್ಯ: ಜೆಡಿಎಸ್ ಮತ್ತು ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಈ ಬಾರಿ ಕಮಲ ಅರಳಿಸುವ ಉತ್ಸಾಹದಲ್ಲಿ ಏಳು ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ಆದರೆ ಕೆಲ ಕ್ಷೇತ್ರದಲ್ಲಿ ಒಳೇಟಿನ ಕಾರ್ಮೋಡ ಆವರಿಸಿದೆ.

ಕೆ.ಆರ್.ಪೇಟೆಯಿಂದ ಹಾಲಿ ಸಚಿವ ಕೆ.ಸಿ.ನಾರಾಯಣಗೌಡ, ಮಂಡ್ಯದಿಂದ ಅಶೋಕ್ ಜಯರಾಂ, ಮಳವಳ್ಳಿಯಿಂದ ಮುನಿರಾಜು, ಶ್ರೀರಂಗಪಟ್ಟಣದಿಂದ ಇಂಡುವಾಳು ಸಚ್ಚಿದಾನಂದ, ಮದ್ದೂರಿನಿಂದ ಎಸ್.ಪಿ.ಸ್ವಾಮಿ, ಮೇಲುಕೋಟೆಯಿಂದ ಡಾ.ಇಂದ್ರೇಶ್‌ಗೆ ಮಣೆ ಹಾಕಲಾಗಿದೆ. ಅಚ್ಚರಿ ಎನ್ನುವಂತೆ ನಾಗಮಂಗಲ ಕ್ಷೇತ್ರದಿಂದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರ ಪತ್ನಿ ಸುಧಾ ಅವರಿಗೆ ಅವಕಾಶ ನೀಡಲಾಗಿದೆ.

ನಾಗಮಂಗಲ ಹೊರತುಪಡಿಸಿ ಉಳಿದೆಡೆ ಘೋಷಣೆಯಾಗಿರುವ ಹೆಸರನ್ನೇ ನಿರೀಕ್ಷೆ ಮಾಡಲಾಗಿತ್ತು. ಅದರಲ್ಲಿಯೂ ಬಹುತೇಕರು ಹೊಸ ಮುಖವಾಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್‌ನ ರಾಜಕೀಯ ತಂತ್ರಕ್ಕೆ ಸರಿಯಾದ ಪ್ರತಿತಂತ್ರ ಮಾಡುವ ಸವಾಲು ಇದೆ. ಮಂಡ್ಯ ಜಿಲ್ಲೆ ಹಿಂದಿನಿಂದಲೂ ಬಿಜೆಪಿಗೆ ವರದಾನವಾಗಿಲ್ಲ. ಆದರೆ ಈ ಬಾರಿ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಕಮಲ ಅರಳಿಸುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಷಾ ಜಿಲ್ಲೆಗೆ ಭೇಟಿ ಕೊಟ್ಟು ಹೋಗಿದ್ದಾರೆ. ಅದು ಎಷ್ಟರಮಟ್ಟಿಗೆ ಫ್ಲಸ್ ಆಗಲಿದೆ ಎನ್ನುವುದು ಮುಖ್ಯವಾಗಲಿದೆ.

ಪ್ರಮುಖವಾಗಿ ಈ ಬಾರಿಯ ಚುನಾವಣಾ ನಾಯಕತ್ವ ಯಾರು ತೆಗೆದುಕೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಏಳು ಕ್ಷೇತ್ರದಲ್ಲಿ ಸಂಚಾರ ನಡೆಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ಹೊರುವುದು ಸುಲಭವಲ್ಲ. ಸಚಿವ ಕೆ.ಸಿ.ನಾರಾಯಣಗೌಡ ನೇತೃತ್ವದಲ್ಲಿಯೇ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಠೇವಣಿ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನುವುದು ಗಮನಾರ್ಹ.

ಸಚಿವ ಕೆಸಿಎನ್‌ಗೆ ಅಸ್ಥಿರತೆ: ಜಿಲ್ಲೆಯ ಮೊದಲ ಬಿಜೆಪಿ ಶಾಸಕ ಎನ್ನುವ ಹೆಗ್ಗಳಿಕೆ ಹೊಂದಿರುವ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ಚುನಾವಣಾ ಅಸ್ಥಿರತೆ ಕಾಡುತ್ತಿದೆ. ಪಕ್ಷ ಬಿಟ್ಟು ಕಾಂಗ್ರೆಸ್ ಸೇರಲು ಅತ್ಯುತ್ಸಾಹ ತೋರಿದ ಅವರು, ಇದ್ದಕ್ಕಿದ್ದಂತೆ ಮನಸ್ಸು ಬದಲಿಸಿ ಬಿಜೆಪಿಯಲ್ಲಿಯೇ ಉಳಿದುಕೊಂಡರು. ಆದರೆ ಆ ಸಮಯದಲ್ಲಿ ನಡೆದ ಬೆಳವಣಿಗೆ ಪಕ್ಷದ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಇರಿಸು ಮುರಿಸು ತರಿಸಿತ್ತು. ಜತೆಗೆ ಪಕ್ಷದೊಳಗಿರುವ ಕೆಲ ಸಮುದಾಯದ ಮುಖಂಡರು ಕೆಸಿಎನ್ ವರ್ತನೆ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಸ್ಥಳೀಯ ಕಾಂಗ್ರೆಸ್ ಬೆಂಬಲದ ಜತೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟದವರು ಬಂದು ಮತಯಾಚನೆ ಮಾಡಿದರೂ ಸುಮಾರು 9 ಸಾವಿರ ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದ ಕೆಸಿಎನ್‌ಗೆ ಈ ಬಾರಿ ತ್ರಿಕೋನ ಸ್ಪರ್ಧೆ ಎದುರಿಸಬೇಕಿದೆ. ಜೆಡಿಎಸ್, ಕಾಂಗ್ರೆಸ್ ಕೂಡ ಪ್ರಬಲವಾಗಿಯೇ ಸಿದ್ಧವಾಗಿವೆ. ಆದರೂ ಕೆಸಿಎನ್ ವರ್ತನೆಯಿಂದ ಅಸಮಾಧಾನಗೊಂಡಿರುವವರು ಚುನಾವಣೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಸಚಿವರಿಗೆ ಆತಂಕವಿದೆ. ಈ ಹಿನ್ನೆಲೆಯಲ್ಲಿ ಕೆಸಿಎನ್ ಇದೀಗ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಫೈಟರ್‌ರವಿ ನಡೆ ನಿಗೂಢ?: ನಾಗಮಂಗಲ ಕ್ಷೇತ್ರದ ಬೆಳವಣಿಗೆ ಕುತೂಹಲ ಮೂಡಿಸಿದೆ. ಪಕ್ಷ ಸಂಕಷ್ಟದಲ್ಲಿದ್ದಾಗ ಫೈಟರ್ ರವಿ ಬಂದರು. ಮಾತ್ರವಲ್ಲದೆ ಸಂಘಟನೆ ಮಾಡುತ್ತಾ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಿದರು. ಇದಕ್ಕೂ ಮುನ್ನ ಕೋಟ್ಯಂತರ ರೂ ವ್ಯಯಿಸಿ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಘಟಕ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಸಾಮಾಜಿಕ ಸೇವೆ ಮಾಡಿದ್ದ ರವಿ ಅವರಿಗೆ ಹೋದಲೆಲ್ಲ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿಕೊಂಡಿದ್ದ ರವಿ, ಇದ್ದಕ್ಕಿದ್ದಂತೆ ಬಿಜೆಪಿ ಸೇರಿದರು. ಮಾತ್ರವಲ್ಲದೆ ಯುವಕರನ್ನು ಸಂಘಟಿಸಿದರು. ಕ್ಷೇತ್ರದಲ್ಲಿ ದುರ್ಬಲಗೊಂಡಿದ್ದ ಬಿಜೆಪಿಗೆ ಟಾನಿಕ್ ಕೊಡುವಂತ ಚಟುವಟಿಕೆ ಮಾಡಿದ್ದರು. ಅವರಿಗೆ ಅವಕಾಶ ಸಿಗಲಿದೆ ಎನ್ನುವುದರ ನಡುವೆಯೇ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬಿಜೆಪಿ ಸೇರಿದರು. ಮಾತ್ರವಲ್ಲದೆ ತಮ್ಮ ಪತ್ನಿಗೆ ಅವಕಾಶ ಕೊಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಆದರೆ ಪಕ್ಷ ಸಂಘಟಿಸಿದ ಫೈಟರ್ ರವಿ ವಿಚಾರದಲ್ಲಿ ಬಿಜೆಪಿಗರ ಬಗ್ಗೆ ಅವರ ಬೆಂಬಲಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಆದ್ದರಿಂದ ರವಿ ಅವರ ಮುಂದಿನ ನಡೆ ಏನೆಂಬುದು ನಿಗೂಢವಾಗಿದ್ದು, ಪಕ್ಷ ಬಿಟ್ಟು ಪಕ್ಷೇತರವಾಗಿ ಕಣಕ್ಕಿಳಿಯುತ್ತಾರೋ ಅಥವಾ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.

ಪಟ್ಟಣದಲ್ಲಿಯೂ ಮುನಿಸು: ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಎಲ್ಲರೂ ಸರಿ ಇರುವಂತೆ ಕಂಡರೂ ಒಳಗೊಳಗೆ ಮುನಿಸು ಇರುವುದು ಗುಟ್ಟೇನಲ್ಲ. ಬಿ ಫಾರ್ಮ್ ರೇಸ್‌ನಲ್ಲಿದ್ದ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೂಲಕ ಲಾಭಿ ನಡೆಸಿದ್ದರು. ಆದರೂ ಅವಕಾಶ ಸಿಕ್ಕಿಲ್ಲ. ಸಂಸದೆ ಸುಮಲತಾ ಬೆಂಬಲದಿಂದ ಇಂಡುವಾಳು ಸಚ್ಚಿದಾನಂದ ಅವರಿಗೆ ಮಣೆ ಹಾಕಲಾಗಿದೆ.

ಮೀಸಲು ಕ್ಷೇತ್ರ ಮಳವಳ್ಳಿಯಲ್ಲಿ ಮುನಿರಾಜು ಅವರಿಗೆ ಅವಕಾಶ ನೀಡಿರುವುದರಿಂದ ಮಾಜಿ ಸಚಿವ ಸೋಮಶೇಖರ್‌ಗೆ ಬೇಸರವಾಗಿದೆ. ಹಲವು ದಿನದಿಂದಲೂ ತಮಗೆ ಬಿ ಫಾರ್ಮ್ ಸಿಗಲಿದೆ ಎನ್ನುತ್ತಿದ್ದರು. ಅವರ ಪರ ಕೆಲವರು ಬ್ಯಾಟಿಂಗ್ ಕೂಡ ಮಾಡಿದ್ದರು. ಅತ್ತ ಮದ್ದೂರಿನಲ್ಲಿ ಸ್ವಾಮಿಗೆ ಮಣೆ ಹಾಕಲಾಗಿದೆ. ಕೆಲ ದಿನದ ಹಿಂದೆಯಷ್ಟೇ ಮಂಡಲದ ಅಧ್ಯಕ್ಷ ಸುದ್ದಿಗೋಷ್ಠಿ ಮಾಡಿ ಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಶಿವಣ್ಣ ಬೆಂಬಲಿಗರಿಗೆ ಬೇಸರ: ಮಂಡ್ಯ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಡಿ.ಜಯರಾಂ ಅವರ ಮಗ ಅಶೋಕ್‌ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದು ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿಯೂ ಆದ ಸಜ್ಜನ ರಾಜಕಾರಣಿ ಚಂದಗಾಲು ಶಿವಣ್ಣ ಅವರ ಬೆಂಬಲಿಗರಲ್ಲಿ ಬೇಸರ ತರಿಸಿದೆ. ಬಿಜೆಪಿಗೆ ನೆಲೆಯೇ ಇಲ್ಲ ಎನ್ನುವ ವೇಳೆ 2018ರಲ್ಲಿ ಸ್ಪರ್ಧೆ ಮಾಡಿದ್ದ ಶಿವಣ್ಣ 32064 ಮತಗಳನ್ನು ಪಡೆದಿದ್ದರು. ಇದು ಬಿಜೆಪಿಯ ವರ್ಚಸ್ಸು ಹೆಚ್ಚಿಸಿತ್ತು. ಅದರಂತೆ ಈ ಬಾರಿ ಅವಕಾಶದ ನಿರೀಕ್ಷೆಯಲ್ಲಿದ್ದರು. ಇತ್ತೀಚಿಗೆ ಅವರಿಗೆ ಅನಾರೋಗ್ಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇಂದ್ರೇಶ್‌ಗೆ ಸಿಗುತ್ತಾ ಸಂಸದೆ ಬೆಂಬಲ?: ಇತ್ತೀಚೆಗಷ್ಟೇ ಬಿಜೆಪಿಗೆ ಬೆಂಬಲ ಘೋಷಿಸಿರುವ ಸಂಸದೆ ಸುಮಲತಾ ಈ ಚುನಾವಣೆಯಲ್ಲಿ ಡಾ.ಇಂದ್ರೇಶ್ ಪರ ಮತಯಾಚನೆ ಮಾಡುತ್ತಾರೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕೊಟ್ಟ ಬೆಂಬಲದ ಮೇರೆಗೆ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪರ ಮತಯಾಚಿಸುವುದಾಗಿ ಸಂಸದೆ ಅವರೇ ಹೇಳಿಕೊಂಡಿದ್ದರು. ಇದೀಗ ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಿರುವುದರಿಂದ ಸಂಸದೆ ನಿಲುವು ಏನೆಂದು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net