ಜೆಡಿಎಸ್​ಗೆ 8 ಕ್ಷೇತ್ರ ಬಿಟ್ಟುಕೊಡಲಿ

GTD NEW
Published on

ಹುಬ್ಬಳ್ಳಿ : ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ಹಾಸನ, ಮಂಡ್ಯ, ಮೈಸೂರು, ತುಮಕೂರು, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬಿಜೆಪಿ ಪ್ರಮುಖರೊಂದಿಗೆ ರ್ಚಚಿಸುವಂತೆ ನಮ್ಮ ಮುಖಂಡರಲ್ಲಿ ಕೇಳಿಕೊಂಡಿದ್ದೇವೆ ಎಂದು ಮಾಜಿ ಸಚಿವ, ಜೆಡಿಎಸ್ ರಾಜ್ಯ ಕೋರ್ ಕಮೀಟಿ ಅಧ್ಯಕ್ಷ ಜಿ.ಟಿ. ದೇವೆಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಿಂದ ಸುಮಲತಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ ನಮ್ಮದೇನೂ ತಕರಾರು ಇಲ್ಲ. ಹಾಗಾದಲ್ಲಿ ಜೆಡಿಎಸ್​ಗೆ ಬೆಂಗಳೂರು ಉತ್ತರ ಕ್ಷೇತ್ರ ಬಿಟ್ಟುಕೊಡುವಂತೆ ಕೇಳುತ್ತೇವೆ. ಆದರೆ, ನಾರಾಯಣಗೌಡರು ಕಾಂಗ್ರೆಸ್​ನತ್ತ ವಾಲುತ್ತಿರುವುದರಿಂದ ಸುಮಲತಾ ಬಿಜೆಪಿ ಸೇರುವುದು ಅನುಮಾನ ಎಂದರು.

ದೇವೆಗೌಡರ ಕುಟುಂಬದಿಂದ ಈ ಚುನಾವಣೆಯಲ್ಲಿ ಒಬ್ಬರೇ ಕಣಕ್ಕೆ ಇಳಿಯುತ್ತಾರೆ. ಒಂದು ವೇಳೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಿದರೆ ಇಬ್ಬರು ಕಣಕ್ಕೆ ಇಳಿದಂತಾಗುತ್ತದೆ ಎಂದು ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ 28 ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಈ ಚುನಾವಣೆ ನಂತರ ಮೈತ್ರಿ ಮುಂದುವರೆಸುವ ಬಗ್ಗೆ ರ್ಚಚಿಸಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಬೇಕಾದರೆ ಮೈತ್ರಿ ಮುಂದುವರೆಸುವುದು ಒಳಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿದ್ದನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಶಾಲ್ ತೊಟ್ಟಿರಲಿಲ್ಲ. ಅದು ಕೇಸರಿ ಶಾಲ್. ಹನುಮ ಭಕ್ತನೊಬ್ಬ ಆ ಶಾಲ್ ತೊಡಿಸಿದ್ದ ಎಂದ ದೇವೆಗೌಡ, ಬಿಜೆಪಿ ಹಾಗೂ ಜೆಡಿಎಸ್​ನ ತತ್ವ, ಸಿದ್ಧಾಂತಗಳು ಭಿನ್ನವಾಗಿವೆ. ಮೈತ್ರಿ ಚುನಾವಣೆಗೆ ಮಾತ್ರ ಸೀಮಿತ. ತತ್ವ, ಸಿದ್ಧಾಂತಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಐಎನ್​ಡಿಐಎ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾದರೆ ಸ್ವಾಗತ. ಆದರೆ, ಒಕ್ಕೂಟದ ಪಕ್ಷಗಳು ಒಂದೊಂದಾಗಿ ಕಳಚುತ್ತಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿದ್ದಾರೆ. ಹೀಗಾಗಿ, ಖರ್ಗೆ ಪ್ರಧಾನಿ ಅಭ್ಯರ್ಥಿಯಾಗುವುದು ಕನಸಿನ ಮಾತು ಎಂದು ಟೀಕಿಸಿದರು.

ರಾಜ್ಯ ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳು ಹಣಕಾಸಿನ ತೊಂದರೆ ಅನುಭಿಸುತ್ತಿವೆ. ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯಲು ಪ್ರಯತ್ನಿಸಬೇಕಿಲ್ಲ. ಆ ಪಕ್ಷ ತನ್ನ ಭಾರದಿಂದಲೇ ಕುಸಿಯುತ್ತದೆ ಎಂದು ಭವಿಷ್ಯ ನುಡಿದರು.

ಮಾಜಿ ಸಚಿವ ಕೆ.ಎನ್. ಗಡ್ಡಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಗುರುರಾಜ ಹುಣಸಿಮರದ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net