ಕುಣಿಗಲ್ ಪುರಸಭೆಗೆ ರಂಗಸ್ವಾಮಿ ಅಧ್ಯಕ್ಷ ; ಉಪಾಧ್ಯಕ್ಷೆಯಾಗಿ ಶಬನಾ ತಬಸಮ್ ಅವಿರೋಧ ಆಯ್ಕೆ

IMG_20220105_130723
Published on

ಕುಣಿಗಲ್ : ಪುರಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ಸದಸ್ಯ ರಂಗಸ್ವಾಮಿ ಹಾಗೂ ಉಪಾಧ್ಯಕ್ಷೆಯಾಗಿ ಶಬನಾ ತಬಸಮ್ ಅವಿರೋಧ ಆಯ್ಕೆಯಾದರು. ಒಡಂಬಡಿಕೆಯಂತೆ ಈ ಹಿಂದಿನ ಅಧ್ಯಕ್ಷ ಎಸ್.ಕೆ.ನಾಗೇಂದ್ರ ಹಾಗೂ ಉಪಾಧ್ಯಕ್ಷೆ ಮಂಜುಳಾ ರಂಗಪ್ಪ ರಾಜೀನಾಮೆ ನೀಡಿದ್ದು, ತೆರವಾಗಿದ್ದ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ರಂಗಸ್ವಾಮಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಬನಾ ತಬಸಮ್ ನಾಮಪತ್ರ ಸಲ್ಲಿಸಿದರು. ಪುರಸಭೆಯಲ್ಲಿ ಒಟ್ಟು 23 ಸದಸ್ಯ ಬಲ ಹೊಂದಿದ್ದು. ಕಾಂಗ್ರೆಸ್ 16, ಬಿಜೆಪಿ 4 ಹಾಗೂ ಜೆಡಿಎಸ್3 ಸದಸ್ಯ ಬಲ ಹೊಂದಿದೆ.

ಪೈಕಿ ಜೆಡಿಎಸ್‌ನ ಓರ್ವ ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಕಾಂಗ್ರೆಸ್ ಬಲ 17ಕ್ಕೆ ಏರಿಕೆಯಾಗಿದೆ. ಅಧ್ಯಕ್ಷ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ನಾಮಪತ್ರ ಸಲ್ಲಿಸದೇ ಚುನಾವಣೆ ಸಭೆಗೆ ಗೈರಾದ ಕಾರಣ ಕಾಂಗ್ರೆಸ್‌ನ ರಂಗಸ್ವಾಮಿ ಹಾಗೂ ಶಬನಾ ತಬಸಮ್ ಅವಿರೋಧ ಅಯ್ಕೆಯಾದರು. ಕಾಂಗ್ರೆಸ್ 17 ಮಂದಿ ಸದಸ್ಯರು ಹಾಗೂ ಶಾಸಕ ಡಾ.ರಂಗನಾಥ್ ಭಾಗವಹಿಸಿದ್ದರು. ತಹಸೀಲ್ದಾರ್ ಮಹಾಬಲೇಶ್ವರ್ ಚುನಾವಣಾಧಿಕಾರಿಯಾಗಿದ್ದರು.

ವಿಜಯೋತ್ಸವ ಅಚರಣೆ: ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷಕ್ಷೆ ಆಯ್ಕೆಯಾಗಿ ಹೊರ ಬರುತಿದ್ದಂತೆ ಪುರಸಭೆಯ ಮುಭಾಗದಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ನೂತನ ಅಧ್ಯಕ್ಷ ರಂಗಸ್ವಾಮಿ ಹಾಗೂ ಶಾಸಕ ಡಾ.ರಂಗನಾಥ್ ಅವರನ್ನು ಹೊತ್ತು ಕುಣಿದರು. ನಂತರ ಸಿಹಿ ಹಂಚಿ ವಿಜಯೋತ್ಸವ ಅಚರಿಸಿದರು.

ನಂತರ ತೆರದ ವಾಹನದಲ್ಲಿ ಶಾಸಕ ಡಾ.ರಂಗನಾಥ್ ಸೇರಿ ನೂತನ ಅಧ್ಯಕ್ಷ ರಂಗಸ್ವಾಮಿ ಮತ್ತು ಎಲ್ಲ ಸದಸ್ಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಕನ್ನಡ ಹೋರಾಟದಿಂದ ಪುರಸಭೆ ಅಧ್ಯಕ್ಷ ಗಾದಿವರೆಗೆ : ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಕುಣಿಗಲ್ ತಾಲೂಕು ಅಧ್ಯಕ್ಷ ಸ್ಥಾನದಿಂದ ಕನ್ನಡ ಪರ ಹೋರಾಟದಲ್ಲಿ ಬೆಳೆದು ಬಂದ ನೂತನ ಪುರಸಭೆ ಅಧ್ಯಕ್ಷ ರಂಗಸ್ವಾಮಿ ಐದು ಬಾರಿ ಪುರಸಭೆ ಸದಸ್ಯರಾಗಿ ಪುರಸಭೆ ಅಧ್ಯಕ್ಷ ಸ್ಥಾನದ ಗಾದಿಗೆ ಏರಿದ್ದಾರೆ. ಪಟ್ಟಣದಲ್ಲಿ ಕನ್ನಡ ಪರ ಸಂಘಟನೆಗಳ ಹೋರಾಟದಲ್ಲಿ ಸದಾ ಮುಂಚೂಣೆಯಲ್ಲಿ ರಂಗಸ್ವಾಮಿ ಇರುತ್ತಾರೆ.

ಐದು ಬಾರಿ ಪುರಸಭೆ ಸದಸ್ಯನಾಗಿ, 3 ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರೂ ಸ್ಥಾನ ಅಲಂಕರಿಸಲು ಸಾಧ್ಯವಾಗಿರಲಿಲ್ಲ. ಸಾಕಷ್ಟು ತೊಡಕುಗಳು ಎದುರಾಗಿದ್ದವು. ಆದರೆ ಈ ಬಾರಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಡಾ.ರಂಗನಾಥ್ ಅವರು ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಮಾಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ರಂಗಸ್ವಾಮಿ ಪುರಸಭೆ ನೂತನ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net