ಟಿಕೆಟ್ ಘೋಷಣೆಗೂ ಮೊದಲೇ ನಾಮಪತ್ರ ಸಲ್ಲಿಸಿದ ರಾಜೇಂದ್ರ

17TMK_Rajendra_Naamapatra
Published on

ತುಮಕೂರು : ಡಿಸೆಂಬರ್ 10 ರಂದು ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ರಾಜೇಂದ್ರ ಬುಧವಾರ ಉಮೇದುವಾರಿಕೆ ಸಲ್ಲಿಸಿದ್ದು, ಕಾಂಗ್ರೆಸ್ ಟಿಕೆಟ್‌ಗೆ ಒತ್ತಡ ಹಾಕಿದ್ದಾರೆ.

ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿಲ್ಲವಾದರೂ ಆರ್.ರಾಜೇಂದ್ರ ನಾಮಪತ್ರ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ, ದಲಿತ ಎಡಗೈ ಹಾಗೂ ಒಕ್ಕಲಿಗ ಸಮುದಾಯದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಲಾಬಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಾಜೇಂದ್ರ ತರಾತುರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಬುಧವಾರ ಬೆಳಗ್ಗೆ ತಮ್ಮ ಬೆಂಬಲಿಗರಾದ ಕಲ್ಲಹಳ್ಳಿ ದೇವರಾಜ್ ಮತ್ತು ಕೊಟ್ಟ ಶಂಕರ್ ಜತೆಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಆರ್.ರಾಜೇಂದ್ರ ಚುನಾವಣಾಧಿಕಾರಿ ವೈ.ಎಸ್.ಪಾಟೀಲಗೆ ನಾಮಪತ್ರ ಸಲ್ಲಿಸಿ ಸುದ್ದಿಗಾರರ ಜತೆ ಮಾತನಾಡಿದರು.

ಬುಧವಾರ ಒಳ್ಳೆಯ ದಿನವಾದ್ದರಿಂದ ವಿಧಾನ ಪರಿಷತ್ ಚುನಾವಣೆಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ, ಟಿಕೆಟ್ ಸಿಗುವ ವಿಶ್ವಾಸವಿದ್ದು ಬಿ ಫಾರಂ ಸಿಕ್ಕ ಮೇಲೆ ಎಲ್ಲ ಮುಖಂಡರ ಜತೆ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೇನೆ ಎಂದರು.

ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆ ಸದಸ್ಯರನ್ನು ಭೇಟಿ ಮಾಡಿದ್ದು, ಕಳೆದ ಸಲ ಪರಾಭವಗೊಂಡಿದ್ದೇನೆ ಎಂಬ ಅನುಕಂಪ ಸಹ ಎಲ್ಲ ಮತದಾರ ಸದಸ್ಯರಲ್ಲಿದೆ. ಆದ್ದರಿಂದ ಈ ಬಾರಿ ಅತ್ಯಧಿಕ ಮತಗಳಿಂದ ಗೆಲ್ಲಿಸುವ ವಿಶ್ವಾಸವಿದೆ ಎಂದರು.

ನಾಮಪತ್ರ ಸಲ್ಲಿಸಿಕೆಗೂ ಪೂರ್ವದಲ್ಲಿ ನಗರದ ಕೋಟೆ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಜೇಂದ್ರ ಕುಟುಂಬ ಸದಸ್ಯರ ಜತೆ ಪೂಜೆ ಸಲ್ಲಿಸಿದರು. ಅವರ ತಾಯಿ, ಜಿಪಂ ಮಾಜಿ ಸದಸ್ಯೆ ಶಾಂತಲಾ ಕೂಡ ಸಾಥ್ ನೀಡಿದ್ದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವಕೀಲ ನಾರಾಯಣಗೌಡ, ನಗರಸಭೆ ಮಾಜಿ ಅಧ್ಯಕ್ಷ ಟಿ.ಪಿ.ಮಂಜುನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆ ಮಠ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಎನ್.ಮೂರ್ತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net