

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಚುನಾವಣೆ ಎಂದರೆ ವ್ಯಕ್ತಿ ಬಗ್ಗೆ ಟೀಕೆಗಳು, ತೇಜೋವಧೆ ಮಾಡುವುದು, ಒಬ್ಬರು ಮತ್ತೊಬ್ಬರ ಮೇಲೆ ಕೆಸರೆರಚಾಟ ಮಾಡುವುದು ಸಾಮಾನ್ಯ. ಅಭ್ಯರ್ಥಿಗಳು ಒಂದು ಹೆಜ್ಜೆ ಮುಂದೆ ಹೋಗಿ ಎದುರಾಳಿಯ ಜೀವನ, ಕುಟುಂಬವನ್ನೂ ಬೀದಿಗೆ ತರುವುದು ಸಹಜ. ಆದರೆ ಈ ಬಾರಿಯ ಚಿಕ್ಕಬಳ್ಳಾಪುರ ಲೋಕಸಭಾ ಸಮರದಲ್ಲಿ ಎರಡೂ ಪಕ್ಷದ ಅಭ್ಯರ್ಥಿಗಳು ಪರಸ್ಪರ ವ್ಯಕ್ತಿಯ ತೇಜೋವಧೆ, ಟೀಕೆಗಿಳಿಯದೆ ಮತಪ್ರಚಾರ ನಡೆಸಿದ್ದು ವಿಶೇಷ.
ಹೌದು! ರಾಜ್ಯದ ಪಾಲಿಗೆ ಹೈವೋಲ್ಟೇಜ್ ಸಮರ ಕಣವಾಗಿ ಗಮನ ಸೆಳೆದ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳು ಬಿರುಸಿನ ಮತಪ್ರಚಾರ ನಡೆಸಿದರು. ಒಬ್ಬರು ಮತ್ತೊಬ್ಬರಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಎಂಬಂತೆ ಮತಬೇಟೆ ನಡೆಸಿದರು. ಆದರೆ ಎಲ್ಲಿಯೂ ಎರಡೂ ಕಡೆಯ ಅಭ್ಯರ್ಥಿಗಳು ವ್ಯಕ್ತಿಗತ ಟೀಕೆಗಿಳಿಯದೆ ಪ್ರಬುದ್ಧತೆ ಪ್ರದರ್ಶಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಪ್ರಮುಖವಾಗಿ ಗಮನ ಸೆಳೆದ ವಿಷಯವಾಗಿದೆ.
ಕಾಂಗ್ರೆಸ್‌ನ ಯೂತ್ ಕಾರ್ಯದರ್ಶಿ ರಕ್ಷಾರಾಮಯ್ಯ, ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಚುನಾವಣಾ ಕಣದಲ್ಲಿ ಮುಖಾಮುಖಿಯಾಗಿದ್ದು, ಸಹಜವಾಗಿಯೇ ಚಿಕ್ಕಬಳ್ಳಾಪುರ ಲೋಕಸಮರ ಕಣವನ್ನು ರಂಗೇರಿಸಿತ್ತು. ಆರಂಭದಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯ ಸಾಕಷ್ಟು ಕುತೂಹಲ ಮೂಡಿಸಿತ್ತು. ಅಭ್ಯರ್ಥಿಗಳ ಪಟ್ಟಿಯಲ್ಲಿ ಸಾಕಷ್ಟು ಜನರ ಹೆಸರು ತೇಲಿಬರುತ್ತಿತ್ತು. ಆದರೆ ಅಂತಿಮವಾಗಿ ರಕ್ಷಾರಾಮಯ್ಯ ಹಾಗೂ ಡಾ.ಕೆ.ಸುಧಾಕರ್ ಚುನಾವಣಾ ಕಲಿಗಳಾಗಿ ತೊಡೆತಟ್ಟಿದ್ದರು. ಅಳೆದು ತೂಗಿದರೆ ಇಬ್ಬರೂ ಅಭ್ಯರ್ಥಿಗಳು ಘಟಾನುಘಟಿಗಳೇ ಆಗಿದ್ದರೂ ಯಾವುದೇ ಘಳಿಗೆಯಲ್ಲಿಯೂ ಒಬ್ಬರಿಗೊಬ್ಬರು ವ್ಯಕ್ತಿಯ ತೇಜೋವಧೆಗೆ ಮುಂದಾಗಲಿಲ್ಲ.
ಮೋದಿ, ರಾಜ್ಯ ಸರ್ಕಾರ ಟಾರ್ಗೆಟ್
ಚಿಕ್ಕಬಳ್ಳಾಪುರ ಮತ ಸಮರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಸರ್ಕಾರವಷ್ಟೇ ಅಭ್ಯರ್ಥಿಗಳಿಗೆ ಟಾರ್ಗೆಟ್ ಆಗಿತ್ತು. ಕಾಂಗ್ರೆಸ್‌ನವರು ನೇರವಾಗಿ ನರೇಂದ್ರ ಮೋದಿಯವರನ್ನು ಗುರಿಯಾಗಿಟ್ಟುಕೊಂಡು ಟೀಕಾಸಗಳನ್ನು ಪ್ರಯೋಗಿಸಿದರು. 10 ವರ್ಷದಲ್ಲಿ ಮೋದಿ ಸರ್ಕಾರದ ಕೊಡುಗೆ ಶೂನ್ಯ ಎಂದೇ ಪ್ರಚಾರ ನಡೆಸಿತು. ಕಡೆ ಘಳಿಗೆಯಲ್ಲಿ ಚೊಂಬು ಜಾಹೀರಾತು ನೀಡಿ ಮೋದಿ ಸರ್ಕಾರ ಜನತೆ ಕೊಟ್ಟಿದ್ದು ಖಾಲಿ ಚೊಂಬು ಎಂದು ಮೂದಲಿಸುತ್ತಾ ಮತಬೇಟೆಗೆ ಮುಂದಾಗಿತ್ತು. ಅದೇ ರೀತಿ ಬಿಜೆಪಿ ಹಾಗೂ ಜೆಡಿಎಸ್‌ನವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಟೀಕೆಗಳನ್ನು ಮಾಡುತ್ತಾ ಬಂದರು, ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಬರಿದಾಗಿದೆ, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯ ದಿವಾಳಿಯಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಬಂದರೆ ದೇಶಕ್ಕೂ ಇದೇ ಗತಿ ಎಂದು ಮತದಾರರಲ್ಲಿ ಕಾಂಗ್ರೆಸ್ ವಿರುದ್ಧ ನೆಗೆಟಿವ್ ಯೋಚನೆ ಬಿತ್ತಲು ಪ್ರಯತ್ನಿಸಿತು. ಕಾಂಗ್ರೆಸ್ ಹಾಗೂ ಮೈತ್ರಿ ಪರ ಚುನಾವಣಾ ಪ್ರಚಾರಕ್ಕೆ ಬಂದ ಮುಖಂಡರಲ್ಲಿ ಕೆಲವರು ಅಭ್ಯರ್ಥಿ ವಿರುದ್ಧ ವೈಯಕ್ತಿಕ ಟೀಕೆಗೆ ಇಳಿದರೂ ಅಭ್ಯರ್ಥಿಗಳು ಮಾತ್ರ ವ್ಯಕ್ತಿಗತ ಟೀಕೆಗೆ ಇಳಿಯಲಿಲ್ಲ.
ಲಿತಾಂಶದ ಕುತೂಹಲ
ರಾಜ್ಯದ ಪಾಲಿಗೆ ಎರಡು ಹಂತದ ಮತದಾನ ಮುಗಿದಿದೆ, ಚಿಕ್ಕಬಳ್ಳಾಪುರ ಕ್ಷೇತ್ರದ ಮೊದಲ ಹಂತದ ಚುನಾವಣೆ ಮುಗಿದು ಸೋಲುಗೆಲುವಿನ ಲೆಕ್ಕಾಚಾರ ಮುಂದುವರೆದಿದೆ. ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯ ಚಿಕ್ಕಬಳ್ಳಾಪುರದ ಮೂರು ವಿಧಾನಸಭಾ ಕ್ಷೇತ್ರ ಗ್ರಾಮಾಂತರ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರು ಲಿತಾಂಶವನ್ನು ಎದುರು ನೋಡುತ್ತಿದ್ದಾರೆ.
ಚುನಾವಣೆಯಲ್ಲಿ ಗಮನ ಸೆಳೆದ ಪ್ರಮುಖಾಂಶಗಳು
*ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹೊಸಕೋಟೆ ತಾಲೂಕಿನ ಬೆಂಡಗಾನಹಳ್ಳಿಯಲ್ಲಿ ಕಾಂಗ್ರೆಸ್ ಬೆಂಬಗಲಿರಿಂದ ನಕಲಿ ಮತದಾನದ ಆರೋಪ ಸದ್ದು ಮಾಡಿತ್ತು. ಈ ಬಗ್ಗೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು.
*ನೆಲಮಂಗಲದಲ್ಲಿ ಎನ್‌ಡಿಎ ಅಭ್ಯರ್ಥಿಯದು ಎನ್ನಲಾದ 4.5 ಕೋಟಿ ರೂಪಾಯಿಯನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಬಿಜೆಪಿ ಮುಖಂಡರೇ ವೈಮನಸ್ಸಿನಿಂದ ಮಾಹಿತಿ ನೀಡಿ, ಹಿಡಿದುಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
*ಚಿಕ್ಕಬಳ್ಳಾಪುರದಲ್ಲಿ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ನೀಡಿದ ಚೆಂಬಿನ ಜಾಹೀರಾತಿನ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದು ಗಮನ ಸೆಳೆದಿತ್ತು. ಮೋದಿ ಬಿಟ್ಟರೆ ಪ್ರಧಾನಿಯಾಗುವ ಮತ್ತೊಬ್ಬ ನಾಯಕ ಇನ್ನೊಬ್ಬರಿಲ್ಲ ಎಂದ ಅವರು ಮೋದಿ ನೀಡಿದ್ದು ಚೊಂಬಲ್ಲ, ಅಕ್ಷಯಪಾತ್ರೆ ಎಂದು ಬಣ್ಣಿಸಿದ್ದರು.
*ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಪ್ರಚಾರ ಕೈಗೊಂಡ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ನಿಂದ ಒಕ್ಕಲಿಗರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.