

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯದ ಹೈವೋಲ್ಟೇಜ್ ಲೋಕಸಮರದ ಕಣದಲ್ಲೊಂದಾಗಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕೂ ತಾಲೂಕುಗಳನ್ನೊಳಗೊಂಡ ಗ್ರಾಮಾಂತರ ಜಿಲ್ಲೆಯಲ್ಲಿ ಮತದಾನ ಸುಸೂತ್ರವಾಗಿ ನಡೆದಿದೆ.
ನಾಲ್ಕೂ ತಾಲೂಕುಗಳಲ್ಲಿ ಸರಾಸರಿ ಶೇ 81.90 ಮತದಾನವಾಗಿದ್ದು ಎಂದಿನಂತೆ ಮತದಾನದಲ್ಲಿ ಹೊಸಕೋಟೆಯಲ್ಲಿ 86.44 ಮತದಾನವಾಗಿದ್ದು ತಾಲೂಕು ಮೊದಲ ಸ್ಥಾನದಲ್ಲಿದೆ. ನೆಲಮಂಗಲ ಕೊನೆ ಸ್ಥಾನದಲ್ಲಿದ್ದು ಶೇ.77.98 ಮತಚಲಾವಣೆಯಾಗಿದೆ. ದೇವನಹಳ್ಳಿ ಶೇ.85.69 ಹಾಗೂ ದೊಡ್ಡಬಳ್ಳಾಪುರ ಶೇ 80.16 ಮತ ಚಲಾವಣೆಯಾಗಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳು ಸೇರಿ ಸರಾಸರಿ ಅಂದಾಜು ಶೇ.82 ಮತದಾನವಾಗಿದೆ. ಶೇ.100 ಗುರಿಯೊಂದಿಗೆ ಜಿಲ್ಲಾಡಳಿತ ಹಾಗೂ ಜಿಪಂ ನಡೆಸಿದ ಮತದಾನ ಜಾಗೃತಿ ನಡುವೆಯೂ ನಿರೀಕ್ಷಿತ ಮತದಾನವಾಗಿಲ್ಲ.
ಚುನಾವಣಾ ದಿನಾಂಕ ೋಷಣೆಯಾದ ದಿನದಿಂದಲೂ ರಂಗೇರಿದ್ದ ಚುನಾವಣಾ ಕಣ ಮತದಾನದ ಅಂತಿಮ ಕ್ಷಣದವರೆಗೆ ಅದೇ ರಂಗು ಉಳಿಸಿಕೊಂಡಿತ್ತು. ಮತದಾನದ ದಿನವೋ ಅದೇ ಹೈವೋಲ್ಟೇಜ್ ಕಂಡುಬಂತು. ಎಲ್ಲ ಮತಗಟ್ಟೆಗಳಲ್ಲಿ ಮುಂಜಾನೆ 7 ಗಂಟೆಗೆ ಸರಿಯಾಗಿ ಮತದಾನ ಪ್ರಕ್ರಿಯೆ ಆರಂಭವಾಯಿತು. 9 ಗಂಟೆಯಷ್ಟರಲ್ಲಿ
ಮುಂಜಾನೆಯಿಂದಲೇ ಮತಗಟ್ಟೆಗಳತ್ತ ಸರದಿ ಸಾಲು ಕಂಡುಬಂತು. ಉತ್ಸಾಹದಿಂದಲೇ ಮತದಾನ ಕೇಂದ್ರದತ್ತ ದೌಡಾಯಿಸಿದ್ದ ಮತದಾರರು ಮತದಾನದ ಬಳಿಕ ಶಾಹಿ ಹಾಕಿದ ಬೆರಳು ತೋರಿಸಿ ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತಗಟ್ಟೆಗಳ ಸುತ್ತ ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಬೂತ್ ಏಜೆಂಟರುಗಳು ಅತ್ಯುತ್ಸಾಹದಿಂದ ಮತದಾನ ಮಾಡಲು ಬಂದವರಿಗೆ ಮತಚೀಟಿ ಕೊಟ್ಟು ಮತಗಟ್ಟೆಯ ವಿವರಗಳನ್ನು ತಿಳಿಸುತ್ತಿದ್ದರು. ಮತಗಟ್ಟೆ ಬಳಿ ಜನ ಗುಂಪುಗೂಡದಂತೆ ಪೊಲೀಸರು ಹಾಗೂ ಗೃಹರಕ್ಷದ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದರು. ಆಗಾಗ ತಮ್ಮ ಪಕ್ಷಗಳ ಪರ ಅಭ್ಯರ್ಥಿಗಳ ಪರ ಹಿಂಬಾಲಕರು ಜಯಕಾರ ಹಾಕುತ್ತಿದ್ದ ದೃಶ್ಯ ಕಂಡುಬಂತು.
ತಡವಾದ ಮತದಾನ:ದೇವನಹಳ್ಳಿಯ ಕೆಲವೊಂದು ಮತಗಟ್ಟೆಗಳಲ್ಲಿ ಇವಿಎಂ ಯಂತ್ರಗಳಲ್ಲಿ ಕಾಣಿಕೊಂಡ ತಾಂತ್ರಿಕ ದೋಷದ ಕಾರಣ ಅರ್ಧ ತಾಸು ತಡವಾಗಿ ಮತದಾನ ಪ್ರಕ್ರಿಯೆ ಆರಂಭವಾಯಿತು. ಮತಯಂತ್ರಗಳು ಕೈಕೊಡುತ್ತಿದ್ದಂತೆ ತಕ್ಷಣ ಎಚ್ಚೆತ್ತ ಚುನಾವಣಾ ಸಿಬ್ಬಂದಿ ಸ್ಥಳದಲ್ಲೆ ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು ಈ ವೇಳೆ ಸ್ಥಳದಲ್ಲಿ ಗೊಂದಲದ ವಾತಾವರಣ ಕಂಡುಬಂತು. ಮುಂಜಾನೆ 6 ಗಂಟೆಯಿಂದಲೇ ಸರದಿ ಸಾಲಿನಲ್ಲಿ ಕಾದು ನಿಂತಿದ್ದ ಮತದಾರರು ತುಸು ಬೇಸರ ವ್ಯಕ್ತಪಡಿಸಿದರು. ಚುನಾವಣಾ ಸಿಬ್ಬಂದಿ ಜನರನ್ನು ಸಮಾಧಾನಗೊಳಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು. ಅದೇ ರೀತಿ ಹೊಸಕೋಟೆಯ ಮೂರು ಮತಗಟ್ಟೆಗಳಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ತಕ್ಷಣ ಅಧಿಕಾರಿಗಳು ಬದಲಿ ಯಂತ್ರದ ಮೂಲಕ ಮತದಾನಕ್ಕೆ ಅನುವು ಮಾಡಿಕೊಟ್ಟರು ಇದರಿಂದ ಅರ್ಧ ತಾಸು ಮತದಾನ ಪ್ರಕ್ರಿಯೆ ತಡವಾಯಿತು.
ಅಧಿಕಾರಿಗಳ ರೌಂಡ್ಸ್:ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.ಶಿವಶಂಕರ್, ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಅಧ್ಯಕ್ಷೆ ಡಾ.ಕೆ.ಎನ್.ಅನುರಾಧಾ ಕಾಲಿಗೆ ಚಕ್ಕಕಟ್ಟಿಕೊಂಡವರಂತೆ ಮುಂಜಾನೆಯಿಂದಲೇ ಜಿಲ್ಲೆಯ ನಾಲ್ಕೂ ತಾಲೂಕುಗಳ ವಿವಿಧ ಮತಗಟ್ಟೆಗಳಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದ 4 ಯುವ ಮತಗಟ್ಟೆಗಳು, 20 ಮಹಿಳಾ ಮತಗಟ್ಟೆಗಳು(ಸಖಿ), 4 ವಿಶೇಷ ಚೇತನ ಮತಗಟ್ಟೆಗಳು, 4 ವಿಷಯಾಧಾರಿತ ಮತಗಟ್ಟೆಗಳು , 4 ಮಾದರಿ ಮತಗಟ್ಟೆಗಳು ಸೇರಿ 36 ವಿಶೇಷ ಮತಗಟ್ಟೆಗಳಿಗೂ ಅಧಿಕಾರಿಗಳ ತಂಡ ಸರದಿಯಂತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಸ್ಪೀಪ್ ವತಿಯಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಮತದಾನ ಜಾಗೃತಿ ಬೋರ್ಡ್ ಎದುರು ನಿಂತು ಅಧಿಕಾರಿಗಳು ಶಾಹಿ ಹಾಕಿದ ಬೆರಳು ಪ್ರದರ್ಶಿಸಿ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದ ದೃಶ್ಯ ಗಮನ ಸೆಳೆಯಿತು.
ಮತಗಟ್ಟೆಗಳ ನಿಯೋಜನೆ:ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಂತೆ 1137 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅದರಲ್ಲಿ ದೊಡ್ಡಬಳ್ಳಾಪುರ 276, ಹೊಸಕೋಟೆ 293, ದೇವನಹಳ್ಳಿ 292 ಹಾಗೂ ನೆಲಮಂಗಲ್ಲಿ 276 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. 1137 ಮತಗಟ್ಟೆಗಳ ಪೈಕಿ 960 ಸಾಮಾನ್ಯ ಮತಗಟ್ಟೆಗಳು,177 ಸೂಕ್ಷ್ಮ ಮತಗಟ್ಟೆಗಳು ಹಾಗೂ 13 ಅತೀ ಸೂಕ್ಷ್ಮ ಮತಗಟ್ಟೆಗಳಾಗಿ ವಿಂಗಡಿಸಲಾಗಿತ್ತು. ಎಲ್ಲ ಮತಗಟ್ಟೆಗಳಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.
ಬಂದ್ ವಾತಾವರಣ:ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಂದ್ ವಾತಾವರಣ ಕಂಡುಬಂತು, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಂಗಡಿ-ಮುಂಗಟ್ಟುಗಳು ಬಾಗಿಲು ಹಾಕಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಮತಗಟ್ಟೆಗಳ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಜನದಟ್ಟಣೆ ಕಂಡುಬಂದರೂ ಸಾರ್ವಜನಿಕ ಸ್ಥಳಗಳು ಬಿಕೋ ಎನ್ನುತ್ತಿದ್ದವು.
ಗ್ರಾಪಂ ಸದಸ್ಯನಿಗೆ ಥಳಿತ:ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಶಿವನಾಪುರ ಪಂಚಾಯಿತಿ ವ್ಯಾಪ್ತಿಯ ಮಲಪ್ಪನಹಳ್ಳಿಯ ಮತಗಟ್ಟೆ ಕೇಂದ್ರದ ಬಳಿ ಗಲಾಟೆ ನಡೆಸಿದ್ದು, ಪಂಚಾಯಿತಿ ಸದಸ್ಯ ಮುನಿರತ್ನ ಹಾಗೂ ಮತ್ತೊಬ್ಬ ಮುರುಳಿ ಎಂಬುವರಿಗೆ ಗಾಯವಾಗಿದೆ. ಈ ಸಂಬಂಧ ನಂದಗುಡಿ ಠಾಣೆಗೆ ದೂರು ನೀಡಲಾಗಿದೆ. ಮತಗಟ್ಟೆ ಕೇಂದ್ರದ ಬಳಿ ಈಗಾಗಲೇ ಮತದಾನ ಮಾಡಿದ ವ್ಯಕ್ತಿಯೊಬ್ಬ ಮತ್ತೊಂದು ಬಾರಿ ಮತದಾನಕ್ಕೆ ಬಂದಿದ್ದಾನೆ ಎನ್ನಲಾಗಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ಈ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೇಲ್ನೋಟಕ್ಕೆ ಇದು ವಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಗಲಾಟೆ ನಡೆಸಿದೆ ಎನ್ನಲಾಗಿದ್ದರೂ ಈ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಡಿಮಸ್ಟರಿಂಗ್ ಕೇಂದ್ರಕ್ಕೆ ರವಾನೆ: ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ಇಲ್ಲದೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಮುಗಿದಿದೆ. ಮತದಾನ ಪ್ರಕ್ರಿಯೆ ಅಂತಿಮವಾದ ಬಳಿಕ ಚುನಾವಣಾ ಸಿಬ್ಬಂದಿ ಇವಿಎಂ ಯಂತ್ರಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಚುನಾವಣಾಧಿಕಾರಿಗಳು ಪೊಲೀಸ್ ಬಿಗಿ ಭದ್ರತೆಯಲ್ಲಿ ಡಿಮಸ್ಟರಿಂಗ್ ಕೇಂದ್ರಕ್ಕೆ ಸಾಗಿಸಿದರು.