ಬಡತನ ನಿರ್ಮೂಲನೆ ಕಾಂಗ್ರೆಸ್ ಧ್ಯೇಯ

sharath
ರಕ್ಷಾರಾಮಯ್ಯ ವ್ಯಾಪಕ ಪ್ರಚಾರ
Published on


ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ/ಹೊಸಕೋಟೆ
ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಜನರನ್ನು ಕಂಗೆಡಿಸಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಜನ ಸಾಮಾನ್ಯರಿಗೆ ಲಾಭವಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಹೇಳಿದರು.
ದೊಡ್ಡಬಳ್ಳಾಪುರದಲ್ಲಿ ಮತಪ್ರಚಾರ ನಡೆಸಿ ಮಾತನಾಡಿದರು. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬಡತನ ನಿರ್ಮೂಲನೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.
ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸುವುದು ಕಾಂಗ್ರೆಸ್ ಗುರಿಯಾಗಿದೆ. ಅದಕ್ಕಾಗಿ ಪ್ರತಿಯೊಬ್ಬರಿಗೂ ಉದ್ಯೋಗ ತರಬೇತಿ ನೀಡುವುದನ್ನು ಕಾಂಗ್ರೆಸ್ ಆಡಳಿತ ಕಡ್ಡಾಯಗೊಳಿಸಲಿದೆ. ಯುವ ಸಮೂಹದ ಸ್ವಾವಲಂಬಿ ಬದುಕು ನಮ್ಮ ಗುರಿ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಬಿಜೆಪಿ ಭರವಸೆ ಹುಸಿಯಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಯೋಜನೆಗಳ ಕುರಿತು ಜನ ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸರ್ವರ ಪ್ರಗತಿಗಾಗಿ ಕಾಂಗ್ರೆಸ್ ಬೆಂಬಲಿಸಿ, ನನ್ನ ಕ್ರಮ ಸಂಖ್ಯೆ 3. ಹಸ್ತದ ಗುರುತಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ, ರೈತರು, ಮಹಿಳೆಯರು, ಯುವಕರ ರಕ್ಷಣೆಗಾಗಿ ಕಟಿಬದ್ಧವಾಗಿದ್ದು, ಜನರ ನೋವು ಶಮನ ಮಾಡುತ್ತದೆ. ಬಿಜೆಪಿ ಶ್ರೀಮಂತರ ಪರವಾಗಿದ್ದು, ಬಡವರ ಬಗ್ಗೆ ಕಾಳಜಿ ಮಾಡುವುದಿಲ್ಲ. ಹೀಗಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಹೊಸಕೋಟೆಯಲ್ಲಿ ಶರತ್ ಸಾಥ್
ಶಾಸಕ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ಹೊಸಕೋಟೆ ಟೌನ್ ಮತ್ತು ಕಸಬಾ ಹೋಬಳಿಯಲ್ಲಿ ರಕ್ಷಾರಾಮಯ್ಯ ವ್ಯಾಪಕ ಪ್ರಚಾರ ನಡೆಸಿದರು. ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿದರು. ಅನುಗೊಂಡನಹಳ್ಳಿ ಹೋಬಳಿಯ ದೊಡ್ಡದುನ್ನ ಸಂದ್ರ ಕ್ರಾಸ್‌ನಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಎತ್ತಿನಹೊಳೆ ಯೋಜನೆ ಜಾರಿ, ಕೆ.ಸಿ.ವ್ಯಾಲಿ ಯೋಜನೆಯಡಿ ಮೂರನೇ ಹಂತದ ಶುದ್ದೀಕರಣಕ್ಕೆ ಆದ್ಯತೆ, ಕೈಗಾರಿಕೆಗಳ ಸ್ಥಾಪನೆಗೆ ಒತ್ತು. ಚಿಕ್ಕಬಳ್ಳಾಪುರವನ್ನು ದೇಶದ ಪುಷ್ಪೋದ್ಯಮದ ರಾಜಧಾನಿ ಮಾಡುವ ಗುರಿ, ಕೇಂದ್ರ ಸರ್ಕಾರದ ವೈಫಲ್ಯಗಳು, ಬೆಲೆ ಏರಿಕೆ, ಯುವ ಜನಾಂಗದ ನಿರೀಕ್ಷೆಗಳು ಹೀಗೆ ಹತ್ತು ಹಲವು ಸಮಗ್ರ ವಿಚಾರಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದೇನೆ ಎಂದು ರಕ್ಷಾರಾಮಯ್ಯ ಹೇಳಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿ ನಮ್ಮ ಹೊಣೆ. ಮನೆಯ ಮಗನಾಗಿ ಅಭಿವೃದ್ಧಿ ಜವಾಬ್ದಾರಿಯ ನೊಗ ಹೊರುತ್ತೇನೆ. ನಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರ ಜತೆಗೆ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡುತ್ತೇನೆ. ಸಂಸತ್ತಿನಲ್ಲಿ ಕ್ಷೇತ್ರ ಮತ್ತು ರಾಜ್ಯದ ಧ್ವನಿಯಾಗಿ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ, ನ್ಯಾಯಯುತ ಪಾಲು ಪಡೆಯಲು ಶ್ರಮಿಸುತ್ತೇನೆ. ಎಲ್ಲಕ್ಕಿಂತ ಮಿಗಿಲಾಗಿ ಸಂವಿಧಾನ ಉಳಿಸುವುದು ನಮ್ಮ ಗುರಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net