

ವಿಜಯವಾಣಿ ಸುದ್ದಿಜಾಲ ನಂದಗುಡಿ
ಹೋಬಳಿಯ ಶಿವನಾಪುರ ಗ್ರಾಪಂ ವ್ಯಾಪ್ತಿಯ ಕೆ.ಸತ್ಯವಾರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಎಸ್.ಮುನಿರಾಜು, ಉಪಾಧ್ಯಕ್ಷರಾಗಿ ಮುನಿಕೃಷ್ಣಪ್ಪ ಅವಿರೋಧ ಆಯ್ಕೆಯಾದರು.
ಡೇರಿ ಆವರಣದಲ್ಲಿ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ ನಿರ್ದೇಶಕರ ಒಮ್ಮತದೊಂದಿಗೆ ಕಾಂಗ್ರೆಸ್ ಬೆಂಬಲಿತ ಎಸ್.ಮುನಿರಾಜು ಅಧ್ಯಕ್ಷ ಸ್ಥಾನಕ್ಕೆ, ಮುನಿಕೃಷ್ಣಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ ನಾಗರಾಜು ಎಚ್. ಘೋಷಿಸಿದರು.
ಅಧ್ಯಕ್ಷ ಎಸ್.ಮುನಿರಾಜು ಮಾತನಾಡಿ, ಸಂಘದ ಅಭಿವೃದ್ಧಿ ಜತೆಗೆ ರೈತರ ಹಿತ ಕಾಪಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ರೈತರು ಗುಣಮಟ್ಟದ ಹಾಲು ಸರಬರಾಜು ಮಾಡಲು ಕಾಳಜಿ ವಹಿಸಬೇಕು. ತಾಲೂಕಿನಲ್ಲೇ ಮಾದರಿ ಸಹಕಾರಿ ಸಂಘವನ್ನಾಗಿ ರೂಪಿಸಲು ಎಲ್ಲ ಸದಸ್ಯರನ್ನು ಹಾಗೂ ಹೈನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು ಎಂದರು.
ಎಂಪಿಸಿಎಸ್ ಮಾಜಿ ಅಧ್ಯಕ್ಷ ಎಸ್.ಪಿ. ಕೃಷ್ಣಪ್ಪ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಟಿ. ಮುನಿರಾಜು, ಗ್ರಾಪಂ ಸದಸ್ಯರಾದ ಮಂಜುಳಾ ಎಸ್.ಪಿ. ರಾಜಣ್ಣ, ದೇವರಾಜು, ಎಸ್‌ಎಫ್‌ಸಿಎಸ್ ನಿರ್ದೇಶಕ ಎಸ್.ಎನ್. ದೊಡ್ಮನೆ ರಮೇಶ್, ಮುಖಂಡರಾದ ಎಸ್.ಎ. ರಘುನಾಥ್, ಕೃಷ್ಣಮೂರ್ತಿ, ಎಸ್.ಎಂ. ನಾರಾಯಣಸ್ವಾಮಿ, ಎಂ.ಎಸ್. ಆಂಜಿನಪ್ಪ ಹಾಜರಿದ್ದರು.