ಹಣದ ಹರಿವಿಗೆ ಬೇಸರ

12mdk05 Muttappa
Published on

ಮಡಿಕೇರಿ:

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೊಡಗಿನಲ್ಲಿ ಹಣ ಹರಿದಾಡಿರುವ ಬಗ್ಗೆ ಪ್ರಜ್ಞಾವಂತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಜನ ಸೇವೆಯಲ್ಲಿ ನೈಜ ಆಸಕ್ತಿ ಇದ್ದು, ಕೈಯಲ್ಲಿ ಹಣ ಇಲ್ಲದವರಿಗೆ ಮುಂದಿನ ದಿನಗಳಲ್ಲಿ ಗ್ರಾ.ಪಂ. ಚುನಾವಣೆಗಳಲ್ಲೂ ಸ್ಪರ್ಧಿಸಲು ಆಗದ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣ ಆಗಿದೆ. ಹಣದ ವ್ಯವಸ್ಥೆ ಆಗದ ಕಾರಣಕ್ಕೆ ಮತದಾನದ ದಿನ ಮೌನಕ್ಕೆ ಜಾರಿದ್ದ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಡೆಯೂ ಚರ್ಚೆ ಹುಟ್ಟುಹಾಕಿದೆ.
’ಅವರಿಗೆ ಇಷ್ಟು ಕೊಟ್ಟಿದ್ದಾರೆ…ಇವರಿಗೆ ಅಷ್ಟು ಕೊಟ್ಟಿದ್ದಾರೆ…, ರಾತ್ರಿ ಪೂರ್ತಿ ವಾಹನಗಳ ಓಡಾಟ..’ ಮತದಾನ ಮುಗಿದರೂ ಕೊಡಗಿನಲ್ಲಿ ಇಂಥದ್ದೇ ಮಾತುಗಳು ಕೇಳಿ ಬರುತ್ತಿದೆ. ಹಣದ ಈ ಹರಿವು ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರುತ್ತದೆ ಹೇಳಲು ಕಷ್ಟ. ಆದರೆ ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲಲು ಯೋಚಿಸಿದ್ದವರು ಈಗಿನ ಈ ಬೆಳವಣಿಗೆಯಿಂದ ಆತಂಕ ಪಡುವಂತಾಗಿದೆ. ಹಣವಿಲ್ಲದೆ ಚುನಾವಣೆ ನಡೆಸಲು ಸಾಧ್ಯವೇ ಆಗುವುದಿಲ್ಲ ಎನ್ನುವಂತಹ ವಾತಾವರಣ ನಿರ್ಮಾಣ ಆಗಿರುವುದು ಪ್ರಜ್ಞಾವಂತ ಸಮಾಜ ಚಿಂತಿಸುವಂತೆ ಮಾಡಿದೆ.

ಒಂದು ಪಕ್ಷದವರು ತಲಾ ಮತವೊಂದಕ್ಕೆ ೫೦೦ ರೂ. ಕೊಟ್ಟರೆ. ಎದುರಾಳಿ ಪಕ್ಷದವರು ೧ ಸಾವಿರ ರೂ., ೧ ಸಾವಿರ ರೂ. ಕೊಟ್ಟರೆ ೨ ಸಾವಿರ ರೂ. ಹೀಗೆ ಪೈಪೋಟಿ ಮೇಲೆ ಮತದಾರರಿಗೆ ಹಣ ಹಂಚಿರುವುದು ಗೌಪ್ಯವಾಗಿಯೇನೂ ಉಳಿದಿಲ್ಲ. ಕೆಲವು ಕಡೆಗಳಲ್ಲಿ ಮತದಾನದ ಹಿಂದಿನ ದಿನ ಪಕ್ಷವೊಂದರ ಅಭ್ಯರ್ಥಿ ಕಡೆಯವರು ಮನೆ ಮನೆಗೆ ತೆರಳಿ, ’ನಿಮಗೆಷ್ಟು ಹಣ ಬೇಕು ಕೇಳಿ, ನಿಮ್ಮ ಕುಟುಂಬದ ಮತಗಳೆಲ್ಲಾ ನಮಗೇ ಬರುವಂತೆ ನೋಡಿಕೊಳ್ಳಿ,’ ಎಂದು ನೋಟಿನ ಕಂತೆಯನ್ನೇ ಮನೆ ಯಜಮಾನರ ಮುಂದೆ ಹಿಡಿದಿದ್ದಾರೆ.

ಚುನಾವಣಾ ಆಯೋಗ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡು ಗೇಟ್‌ಗಳಲ್ಲಿ ತಪಾಸಣೆ ನಡೆಸಿದರೂ ಹಣದ ಹರಿವಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಹೊರ ಜಿಲ್ಲೆಯಿಂದ ಮಾತ್ರವಲ್ಲದೆ ಜಿಲ್ಲೆಯೊಳಗೂ ಕೋಟಿಗಟ್ಟಲೆ ಮೊತ್ತ ಮತದಾನದ ಹಿಂದಿನ ದಿನ ಎಲ್ಲೆಂದರಲ್ಲಿ ಹರಿದಾಡಿದೆ. ಸ್ಥಳೀಯ ಮುಖಂಡರಿಂದ ಆರಂಭವಾಗಿ ಕಟ್ಟಕಡೆಯ ಮತದಾರನ ಪೈಕಿ ಬಹುತೇಕರು ಅಭ್ಯರ್ಥಿಗಳ ಕಡೆಯವರು ಕೊಟ್ಟಿರುವ ಗರಿ ಗರಿ ನೋಟು ಜೇಬಿಗಿಳಿಸಿದ್ದಾರೆ.
ಗ್ರಾಮೀಣ ಪ್ರದೇಶ, ಗುಂಪು ಮನೆ, ಕಾಲೋನಿ, ಅಂದಂದಿನ ಜೀವನಕ್ಕೆ ಅಂದದಂದೇ ದುಡಿಯುವವರು… ಹೀಗೆ ಹಣದ ಅವಶ್ಯಕತೆ ಹೆಚ್ಚು ಇದ್ದು, ಕಡಿಮೆ ಮೊತ್ತದಲ್ಲಿ ತೃಪ್ತರಾಗುವವರನ್ನು ಗುರಿಯಾಗಿಸಿಕೊಂಡು ಅಭ್ಯರ್ಥಿಗಳ ಕಡೆಯವರು ಕುರುಡು ಕಾಂಚಾಣವನ್ನು ತಮ್ಮ ಇಷ್ಟದಂತೆ ಕುಣಿಸಿದ್ದಾರೆ. ಕೆಲವು ಕಡೆಗಳಲ್ಲಿ ಮತದಾರರಿಂದ ಆಣೆ, ಪ್ರಮಾಣವನ್ನೂ ಮಾಡಿಸಿಕೊಳ್ಳಲಾಗಿದೆ. ಹಣದ ರುಚಿ ಸಿಕ್ಕಿದ ಕಾರ್ಯಕರ್ತರು, ಸ್ಥಳೀಯ ಮುಖಂಡರು ತಮಗಿಷ್ಟು ಮೊತ್ತ ಕೊಟ್ಟರೆ ಮಾತ್ರ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಹಠ ಹಿಡಿದು ಹಣ ವಸೂಲಿ ಮಾಡಿರುವ ಪ್ರಸಂಗಗಳೂ ವರದಿಯಾಗಿದೆ.
ಮದ್ಯ ಹಂಚಲು ಕೂಡ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯಿಸಲಾಗಿದೆ. ಕಾರ್ಮಿಕರು, ದಿನಗೂಲಿಗಳು ಹೆಚ್ಚು ಇರುವ ಪ್ರದೇಶದಲ್ಲಿ ಯಥೇಚ್ಛವಾಗಿ ಮದ್ಯ ಹಂಚಲಾಗಿದೆ. ಮದ್ಯ ಮಾರಾಟಕ್ಕೆ ನಿರ್ಬಂಧ ಇದ್ದರೂ ಅಭ್ಯರ್ಥಿಗಳ ಕಡೆಯವರು ಜಿಲ್ಲೆಯಾದ್ಯಂತ ಯಾವುದೇ ಅಡೆ, ತಡೆ ಇಲ್ಲದೆ ಮದ್ಯ ಸರಬರಾಜು ಮಾಡಿದ್ದಾರೆ.

ಹಣ ಹಂಚಿಕೆ ವಿಷಯದಲ್ಲಿ ಕೆಲವಡೆ ಅಭ್ಯರ್ಥಿಗಳ ಕಡೆಯವಲ್ಲಿ ಅವರೊಳಗಡೆಯೇ ಜಗಳಗಳೂ ನಡೆದಿರುವುದು ವರದಿಯಾಗಿದೆ. ಕೆಲವು ಕಾರ್ಯಕರ್ತರು ಮುನಿಸಿಕೊಂಡು ಮನೆ ಸೇರಿಕೊಂಡಿದ್ದೂ ಇದೆ. ಇದು ಮತದಾನದ ದಿನ ಬೂತ್‌ಗಳಲ್ಲೂ ಪ್ರತಿಬಿಂಬಿಸಿದೆ.

ಕೊಡಗಿನಲ್ಲಿ ಮತದಾನಕ್ಕಾಗಿ ಹಣ ಹಂಚುವ ಪರಿಪಾಟ ಇತ್ತಾದರೂ ಈ ಪ್ರಮಾಣಕ್ಕೆ ಇರಲಿಲ್ಲ. ಈ ಚುನಾವಣೆಯಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳೇ ಅಚ್ಚರಿಗೆ ಒಳಗಾಗಿದ್ದಾರೆ. ’ಈ ರೀತಿಯ ಸೂಟ್‌ಕೇಸ್ ರಾಜಕಾರಣ ಪುಟ್ಟ ಜಿಲ್ಲೆ ಕೊಡಗಿಗೆ ಒಳ್ಳೆಯದಲ್ಲ. ಭವಿಷ್ಯದಲ್ಲಿ ಜನ ಸಾಮಾನ್ಯರು ರಾಜಕೀಯಕ್ಕೆ ಬರುವುದು ಅಸಾಧ್ಯವಾಗಲಿದೆ,’ ಎಂದು ಆಪ್ತರ ಜೊತೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net