

ಮಡಿಕೇರಿ:
ಒಂದೆರಡು ಚಿಕ್ಕಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ವಿಧಾನಸಭಾ ಚುನಾವಣೆಯ ಮತದಾನ ಜಿಲ್ಲೆಯಾದ್ಯಂತ ಬುಧವಾರ ಶಾಂತಿಯುತ ಮತ್ತು ಬಿರುಸಿನಿಂದ ನಡೆಯಿತು.
ಬೆಳಗ್ಗೆ ೯ ಗಂಟೆ ವೇಳೆಗೆ ಶೇ.೧೧.೭೪, ೧೧ ಗಂಟೆ ಶೇ.೨೬.೫೨, ಮಧ್ಯಾಹ್ನ ೧ ಗಂಟೆಗೆ ಶೇ.೪೫.೬೪, ಮಧ್ಯಾಹ್ನ ೩ ಗಂಟೆಗೆ ೫೮.೨೪ ಹಾಗೂ ಸಂಜೆ ೫ ಗಂಟೆಗೆ ಶೇ.೭೦.೨೮ ಮತದಾನವಾಗಿತ್ತು.
ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಒಟ್ಟು ೫೪೩ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳಗ್ಗಿನ ವೇಳೆಯಲ್ಲಿ ಮತಗಟ್ಟೆ ಕೇಂದ್ರಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಹಕ್ಕು ಚಲಾಯಿಸಿದ್ದು ಕಂಡುಬಂದಿತು. ಪ್ರಥಮ ಬಾರಿಗೆ ಮತಹಕ್ಕು ಚಲಾಯಿಸಿದ ಯುವ ಮತದಾರರು ಸಂತಸದಿಂದ ಮತದಾನದ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ತಿತಿಮತಿ ಗ್ರಾಮದ ಯುವ ಮತದಾರರೊಬ್ಬರು ಮಾತನಾಡಿ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಮತ ಚಲಾಯಿಸಿದ್ದೇನೆ. ಪ್ರಥಮ ಬಾರಿಗೆ ಮತದಾನ ಮಾಡಿದ್ದು ತುಂಬಾ ಖುಷಿ ತಂದಿದೆ ಎಂದರು.
ಗಾಳಿಬೀಡು ಗ್ರಾಮದ ಮತಗಟ್ಟೆಯಲ್ಲಿ ೧೨ ಗಂಟೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದರು.
ಮದೆನಾಡು, ಸುಂಟಿಕೊಪ್ಪ, ಸಿದ್ದಾಪುರ, ಗೋಣಿಕೊಪ್ಪ, ಪೊನ್ನಂಪೇಟೆ, ಹುದಿಕೇರಿ, ಬಾಳೆಲೆ, ಮೂರ್ನಾಡು, ನಾಪೋಕ್ಲು, ಸೋಮವಾರಪೇಟೆ, ಕುಶಾಲನಗರ, ಶನಿವಾರಸಂತೆ, ಕೊಡ್ಲಿಪೇಟೆ, ಮಾದಾಪುರ, ಹೆಬ್ಬಾಲೆ ಮತಗಟ್ಟೆಗಳಲ್ಲಿ ಮತದಾರರು ಮಧ್ಯಾಹ್ನದ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡುಬಂದಿತು.
ಮಾದರಿ ಮತಗಟ್ಟೆಯಾಗಿ ಸ್ಥಾಪಿಸಲಾಗಿದ್ದ ನಗರದ ಹಿಲ್ ರಸ್ತೆಯಲ್ಲಿರುವ ಮತಗಟ್ಟೆಯಲ್ಲಿ ಮತದಾರರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿತ್ತು, ಹಾಗೆಯೇ ಕುಡಿಯುವ ನೀರು ಕಲ್ಪಿಸಲಾಗಿತ್ತು.
ಜಿಲ್ಲೆಯ ವಿವಿಧ ಕಡೆ ಸ್ಥಾಪಿಸಲಾಗಿದ್ದ ಸಖಿ ಮತಗಟ್ಟೆ, ವಿಶೇಷಚೇತನರ ಸ್ನೇಹಿ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ, ಥೀಮ್ ಬೇಸ್‌ಡ್(ಕಾಫಿ, ಅರಣ್ಯ) ಮತಗಟ್ಟೆ ಇತರ ಮತಗಟ್ಟೆಗಳು ಗಮನ ಸೆಳೆದವು.
ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದ್ದ ನಾಗರಹೊಳೆ ಬಳಿಯ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆ, ಹಾಗೆಯೇ ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆದಿವಾಸಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತಹಕ್ಕು ಚಲಾಯಿಸಿ, ಸಂಭ್ರಮಿಸಿದರು. ವಿಶೇಷ ಚೇತನರ ಸ್ನೇಹಿ ಮತಗಟ್ಟೆಗಳಾದ ನಗರದ ಸಂತ ಮೈಕಲರ ಶಾಲೆ ಮತ್ತು ವಿರಾಜಪೇಟೆಯ ಸೇಂಟ್ ಆನ್ಸ್ ಪ್ರೌಢ ಶಾಲೆಯ ಮತಗಟ್ಟೆ ಮತದಾರರ ಗಮನ ಸೆಳೆಯಿತು.
ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಕುಟುಂಬದವರ ಜೊತೆ ಆಗಮಿಸಿ ಸೆಲ್ಫಿ ಫೋಟೋ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು.
ವಿಧಾನಸಭೆ ಚುನಾವಣೆಯು ಮತದಾರರದಲ್ಲಿ ಸಂಭ್ರಮ ಮತ್ತು ಹೊಣೆಗಾರಿಕೆ ಹೆಚ್ಚಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಮತದಾರರ ಹಬ್ಬವೆಂದು ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವದ ಆಶಯ ಸಾಕಾರವಾಗುವಲ್ಲಿ ಚುನಾವಣೆಯ ಪಾತ್ರ ಬಹುದೊಡ್ಡದು ಎಂದು ಹಿರಿಯ ಮತದಾರರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಾರೆ ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಉತ್ಸಾಹದಿಂದ ಮತದಾನದಲ್ಲಿ ಮತದಾರರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.