ರಂಗೇರಿದ ಕೊಡಗು ಚುನಾವಣಾ ಅಖಾಡ

IMG-20230411-WA0063
Published on

ಮಡಿಕೇರಿ:
ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ ಆಗುವುದರೊಂದಿಗೆ ರಣಾಂಗಣದ ಚಿತ್ರಣ ನಿಧಾನಕ್ಕೆ ಸ್ಪಷ್ಟ ಆಗುತ್ತಿದೆ. ಕಾಂಗ್ರೆಸ್ ಹುರಿಯಾಳುಗಳು ಈಗಾಗಲೇ ಉತ್ಸಾಹದಿಂದ ಮುನ್ನುಗ್ಗುತ್ತಿದ್ದು, ಜೆಡಿಎಸ್ ಸ್ಪರ್ಧಿಗಳ ಹೆಸರು ಇನ್ನಷ್ಟೇ ಅಂತಿಮವಾಗಬೇಕಿದೆ. ಈ ಮಧ್ಯೆ ಎರಡು ಕ್ಷೇತ್ರಗಳಲ್ಲೂ ಹಲವು ಪಕ್ಷೇತರರು ಕಣಕ್ಕೆ ಇಳಿಯುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಮಂಗಳವಾರ ರಾತ್ರಿ ಬಿಡುಗಡೆ ಆಗಿರುವ ಬಿಜೆಪಿ ಅಭ್ಯರ್ಥಿಗಳ ಅಧಿಕೃತ ಪಟ್ಟಿಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಹಾಲಿ ಶಾಸಕರ ಹೆಸರೇ ಕಾಣಿಸಿಕೊಂಡಿರುವುದು ಜಿಲ್ಲೆಯ ರಾಜಕೀಯ ಅಂಗಣದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದೆ. ೫ ಬಾರಿ ಶಾಸಕರಾಗಿರುವ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ೪ ಬಾರಿ ಶಾಸಕರಾಗಿರುವ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಈ ಬಾರಿ ಬಿಜೆಪಿ ಬದಲಿಸಲಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿತ್ತು. ಎರಡೂ ಕ್ಷೇತ್ರಗಳಲ್ಲೂ ಹೊಸಬರ ಹೆಸರುಗಳು ಕೇಳಿಬಂದಿದ್ದವು. ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿತ್ತು. ಆದರೆ ಈ ಚುನಾವಣೆಯಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಯಸದ ಬಿಜೆಪಿ ಹೈಕಮಾಂಡ್ ಮತ್ತೆ ಹಾಲಿಗಳನ್ನೇ ಕಣಕ್ಕೆ ಇಳಿಸುವ ಮೂಲಕ ತನ್ನ ಭದ್ರಕೋಟೆಯನ್ನು ಕಾಪಾಡಿಕೊಳ್ಳಲು ಮುಂದಾಗಿದೆ.

ಈ ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ೨೦೧೮ರಲ್ಲಿ ೧೩,೩೫೩ ಮತಗಳ ಅಂತರದಲ್ಲಿ ವಿರಾಜಪೇಟೆಯಲ್ಲಿ ಕಾಂಗ್ರೆಸ್ ೨ನೇ ಸ್ಥಾನದಲ್ಲಿದ್ದರೆ. ಮಡಿಕೇರಿಯಲ್ಲಿ ೧೬,೨೧೫ ಮತಗಳ ಅಂತರದಲ್ಲಿ ಜೆಡಿಎಸ್ ಸಮೀಪದ ಪ್ರತಿಸ್ಪರ್ಧಿ ಆಗಿತ್ತು. ೨೦೧೩ರ ಚುನಾವಣೆಯಲ್ಲಿ ವಿರಾಜಪೇಟೆಯಲ್ಲಿ ಕಾಂಗ್ರೆಸ್ ಕೇವಲ ೩,೪೧೪ ಮತಗಳ ಅಂತರದಿಂದ ಸಮೀಪದ ಪ್ರತಿಸ್ಪರ್ಧಿ ಆಗಿದ್ದರೆ, ಮಡಿಕೇರಿಯಲ್ಲೂ ಕೇವಲ ೪,೬೨೯ ಮತಗಳ ಅಂತದಲ್ಲಿ ಜೆಡಿಎಸ್ ೨ನೇ ಸ್ಥಾನ ಪಡೆದುಕೊಂಡಿತ್ತು. ೨೦೦೮ರಲ್ಲೂ ವಿರಾಜಪೇಟೆಯಲ್ಲಿ ಕಾಂಗ್ರೆಸ್ ೨ನೇ ಸ್ಥಾನದಲ್ಲಿ ಇತ್ತು. ಆಗ ಗೆಲುವಿನ ಅಂತರ ೧೫,೦೭೩ ಮತಗಳು. ಈ ಸಂದರ್ಭದಲ್ಲಿ ಮಡಿಕೇರಿ ಕ್ಷೇತ್ರದಲ್ಲೂ ೨ನೇ ಸ್ಥಾನ ಪಡೆದುಕೊಂಡಿದ್ದು ಕಾಂಗ್ರೆಸ್. ೨೦೧೮ ಮತ್ತು ೨೦೧೩ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಬಿ.ಎ. ಜೀವಿಜಯ ೨೦೦೮ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ೬,೫೮೫ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ೨೦೧೮ರಲ್ಲಿ ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ, ೨೦೧೩ರಲ್ಲಿ ಬಿ.ಟಿ. ಪ್ರದೀಪ್ ಹಾಗೂ ೨೦೦೮ರಲ್ಲಿ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಕಣಕ್ಕೆ ಇಳಿದಿದ್ದರು. ಮಡಿಕೇರಿ ಕ್ಷೇತ್ರದಲ್ಲಿ ೨೦೧೮ರಲ್ಲಿ ಕೆ.ಪಿ. ಚಂದ್ರಕಲಾ ಮತ್ತು ೨೦೧೩ರಲ್ಲಿ ಕೆ.ಎಂ. ಲೋಕೇಶ್ ಸ್ಪರ್ಧೆ ಮಾಡಿದ್ದರು. ಈ ಬಾರಿ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲೂ ಹೊಸ ಮುಖಗಳನ್ನು ಕಣಕ್ಕೆ ಇಳಿಸಿದೆ. ಒಂದೊಮ್ಮೆ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಮತ್ತೆ ಗತವೈಭವ ಮರಳಿಸಲು ಇಬ್ಬರು ಯುವಕರಿಗೆ ಅವಕಾಶ ನೀಡಲಾಗಿದೆ. ಇವರಿಬ್ಬರೂ ಬಿಜೆಪಿಯ ಇಬ್ಬರು ಘಟಾನುಘಟಿಗಳನ್ನು ಎದುರಿಸಿ ಕಾಂಗ್ರೆಸ್ ಧ್ವಜ ಏರಿಸುವ ಸವಾಲು ಸ್ವೀಕರಿಸಿ ರಣಾಂಗಣಕ್ಕೆ ಧುಮುಕಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್ ವಂಚಿತ ಆಕಾಂಕ್ಷಿಗಳಿಂದ ಸದ್ಯದ ಮಟ್ಟಿಗೆ ಯಾವುದೇ ಬಹಿರಂಗ ಪ್ರತಿರೋಧ ಕಂಡುಬಂದಿಲ್ಲ. ಆಂತರಿಕವಾಗಿ ಇರಬಹುದಾಗ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷಕ್ಕಾಗಿ ಕೆಲಸ ಮಾಡುವ ಸಂಕಲ್ಪದೊಂದಿಗೆ ಹೈ ಕಮಾಂಡ್ ತೀರ್ಮಾನವನ್ನು ಒಪ್ಪಿಕೊಂಡಂತಿದೆ. ಆದರೆ ಕಾಂಗ್ರೆಸ್‌ನಲ್ಲಿ ವಿರಾಜಪೇಟೆ ಕ್ಷೇತ್ರದ ಆಕಾಂಕ್ಷಿ ಆಗಿದ್ದ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಮಾಜಿ ಸಚಿವ ಜೀವಿಜಯ ಅವರ ನಿಲುವು ಇನ್ನು ಕೂಡ ಸ್ಪಷ್ಟವಾಗಿಲ್ಲ. ಹರಪಳ್ಳಿ ರವೀಂದ್ರ ಪಕ್ಷೇತರವಾಗಿ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ. ಮತ್ತೊಂದು ಕಡೆ ಜೆಡಿಎಸ್‌ನಿಂದ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.

ಕೊಡಗಿನಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಧಿಕೃತ ಆಗಿಲ್ಲ. ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ತಳಮಟ್ಟದಿಂದಲೇ ಕೆಲಸ ಮಾಡುತ್ತಾ ಬಂದಿರುವ ನಾಪಂಡ ಮುತ್ತಪ್ಪ ಪಕ್ಷದ ಟಿಕೆಟ್ ತಮಗೆ ಖಚಿತವಾಗಿದೆ. ಈ ಬಗ್ಗೆ ಖುದ್ದು ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳುತ್ತಿದ್ದು, ಈ ನಂಬಿಕೆಯಿಂದಲೇ ಭರದ ಪ್ರಚಾರ ನಡೆಸುತ್ತಿದ್ದಾರೆ. ವಿರಾಜಪೇಟೆ ತಾಲೂಕಿನಲ್ಲಿ ಪಕ್ಷದ ಪ್ರಮುಖ ಶಕ್ತಿಯಾಗಿದ್ದ ಸಂಕೇತ್ ಪೂವಯ್ಯ ಈಗಾಗಲೇ ಕಾಂಗ್ರೆಸ್ ಸೇರಿದ್ದು, ಅಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಮಂಜುನಾಥ್ ಸೇರಿದದಂತೆ ಒಂದಿಬ್ಬರು ಆಕಾಂಕ್ಷಿಗಳ ಹೆಸರು ಕೇಳಿ ಬರುತ್ತಿದೆ. ಮತ್ತೊಂದು ಕಡೆ ಕೆಲ ವ್ಯಕ್ತಿಗಳು ಪಕ್ಷೇತರವಾಗಿ ಸ್ಪರ್ಧಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net