ಕೃಷಿಕ ಸಮಾಜ ಕಾರ್ಯಕಾರಿ ಸಮಿತಿಗೆ ಆಯ್ಕೆ

ಕೃಷಿಕ ಸಮಾಜ ಕಾರ್ಯಕಾರಿ ಸಮಿತಿ
Published on

ಹೊಳೆನರಸೀಪುರ: ತಾಲೂಕು ಕೃಷಿಕ ಸಮಾಜ ಕಾರ್ಯಕಾರಿ ಸಮಿತಿಗೆ ಭಾನುವಾರ ಪಟ್ಟಣದ ಕೃಷಿ ಇಲಾಖೆಯ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಒಟ್ಟು 404 ಮತಗಳ ಪೈಕಿ 250 ಮತಗಳು ಚಲಾವಣೆಯಾದವು.

ಅಭ್ಯರ್ಥಿ ಹೊಯ್ಸಳ ಎಸ್.ಅಪ್ಪಾಜಿ ಅವರ ತಂಡದಲ್ಲಿ ಗುರುತಿಸಿಕೊಂಡಿದ್ದ 12 ಅಭ್ಯರ್ಥಿಗಳು ಭರ್ಜರಿಯಾಗಿ ಜಯ ಗಳಿಸುವುದರ ಮೂಲಕ ಗೆಲುವಿನ ನಗೆ ಬೀರಿದರು. ಎಂ ಎನ್.ರಾಜು ಅವರ ತಂಡ ಅವರನ್ನು ಸೇರಿದಂತೆ ಮೂವರು ಗೆಲುವಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಒಟ್ಟು 24 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಇದರಲ್ಲಿ 15 ಅಭ್ಯರ್ಥಿಗಳು ಚುನಾಯಿತರಾಗುವುದಕ್ಕೆ ಅವಕಾಶವಿತ್ತು. ಅದರಲ್ಲಿ ಹೊಯ್ಸಳ ಎಸ್.ಅಪ್ಪಾಜಿ ತಂಡದ ಕೆ.ಅಶೋಕ್, ಉಮೇಶ, ಕುಮಾರ, ಆರ್.ಗಿರೀಶ, ಎನ್.ಆರ್.ದಿವಾಕರ, ಕೆ.ಧನಂಜಯ, ಟಿ.ನಂಜುಂಡೇಗೌಡ, ಎಂ.ಸಿ.ಲಕ್ಷ್ಮೀಗೌಡ, ಕೆ.ಎನ್.ಲೋಕೇಶ್, ವಿಜಯ್‌ಕುಮಾರ್, ಎಂ.ಹಲಗಪ್ಪ ಜಯ ಗಳಿಸಿದರು.

ಎಂ .ಎನ್.ರಾಜು ಸೇರಿದಂತೆ ಅವರ ತಂಡದ ಜಿ.ಎಸ್.ಶೇಖರ್, ಕೆ.ಕುಮಾರಸ್ವಾಮಿ ಚುನಾಯಿತರಾದರು.

ಚುನಾವಣಾ ಮೇಲುಸ್ತುವಾರಿಯಾಗಿ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಎ.ಎಸ್.ಕೋಕಿಲಾ, ಚುನಾವಣಾ ವೀಕ್ಷಕರಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ತೀರ್ಥ ಪ್ರಸಾದ್, ಚುನಾವಣಾ ಅಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಎಚ್.ಸಪ್ನಾ ಕರ್ತವ್ಯ ನಿರ್ವಹಿಸಿದರು.

ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ವಿಜೇತರಿಗೆ ಹಾರ ಹಾಕುವುದರ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಹೊಯ್ಸಳ ಎಸ್.ಅಪ್ಪಾಜಿ ಅವರನ್ನು ಒಳಗೊಂಡ ವಿಜೇತ ತಂಡವು ಸಂಸದರಾದ ಶ್ರೇಯಸ್ ಎಂ.ಪಟೇಲ್ ಅವರ ನಿವಾಸಕ್ಕೆ ತೆರಳಿ ಸಂಸದರನ್ನು ಸನ್ಮಾನಿಸಿ ಗೌರವಿಸಿದರು. ಸಂಸದರು ವಿಜೇತರಾದ ಜಿ.ಎಸ್.ಶೇಖರ ಸೇರಿದಂತೆ ಹೊಯ್ಸಳ ಎಸ್. ಅಪ್ಪಾಜಿ ಅವರ ವಿಜೇತ ತಂಡದವರನ್ನು ಅಭಿನಂದಿಸಿ ಮಾತನಾಡಿದರು.

ಸರ್ಕಾರದಿಂದ ರೈತರಿಗೆ ಸಬ್ಸಿಡಿ ಸೇರಿದಂತೆ ಹಲವು ಸವಲತ್ತನ್ನು ನಿಗದಿತ ಸಮಯದಲ್ಲಿ ದೊರಕಿಸಿಕೊಡುವ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಸದಾ ಕೈ ಜೋಡಿಸಿ. ರೈತರ ಒಡನಾಡಿಯಾಗಿ, ರೈತ ಸ್ನೇಹಿಯಾಗಿ, ಸೇವೆ ಸಲ್ಲಿಸುವ ಮೂಲಕ ರೈತರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸದಾ ಸ್ಪಂದಿಸಿ ಎಂದು ಕಿವಿಮಾತು ಹೇಳಿದರು.

ಹೊಯ್ಸಳ ಎಸ್.ಅಪ್ಪಾಜಿ ಅವರ ಸಹೋದರಿ ಹಾಗೂ ಪುರಸಭೆ ಮಾಜಿ ಉಪಾಧ್ಯಕ್ಷೆ ಹೇಮಶ್ರೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ .ಲಕ್ಷ್ಮಣ, ಮಾಜಿ ಅಧ್ಯಕ್ಷ ವಿ.ಕೆ.ನಾರಾಯಣ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಶಿವಕುಮಾರ್, ಸದಸ್ಯ ಪ್ರಸನ್ನ ಕುಮಾರ್, ಶಿವರಾಜು, ಎಚ್.ಕೆ.ಮಹೇಶ್, ಗಿರೀಶ್, ಮಂಜು, ತಿಮ್ಮೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net