

ಪಿ.ಬಿ.ಹರೀಶ್ ರೈ ಮಂಗಳೂರು
ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಒಂದೂವರೆ ವರ್ಷ ಕಳೆದಿದ್ದು , ಅಧ್ಯಕ್ಷ- ಉಪಾಧ್ಯಕ್ಷರ ಮೀಸಲು ವಿಷಯ ಇತ್ಯರ್ಥವಾಗದ ಕಾರಣ ನೂತನ ಸದಸ್ಯರಿಗೆ ಕರೊನಾದ ಇಂದಿನ ತುರ್ತು ಸಂದರ್ಭದಲ್ಲೂ ಅಧಿಕಾರ ನಿರ್ವಹಣೆ ಸಾಧ್ಯವಾಗುತ್ತಿಲ್ಲ.
ಕೊವಿಡ್-19 ತಡೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರೂಪಿತ ಗ್ರಾಮೀಣ ಕಾರ್ಯಪಡೆ ಯಶಸ್ವಿಯಾಗಿದೆ. ಅದೇ ಮಾದರಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಕರೊನಾ ಜಾಗೃತಿ ಸಮಿತಿ ರಚಿಸಲಾಗಿದೆ. ಆದರೆ ಚುನಾಯಿತ ಪ್ರತಿನಿಧಿಗಳು ಅಧಿಕಾರ ಪಡೆಯದ ಕಾರಣ ನಿರ್ವಹಣೆಗೆ ಹಿನ್ನಡೆಯಾಗಿದೆ.
ಚುನಾಯಿತ ಪ್ರತಿನಿಧಿಗಳಿಲ್ಲದೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುವುದು ಒಂದೆಡೆಯಾದರೆ , ಈಗ ಲಾಕ್‌ಡೌನ್ ಸಂದರ್ಭದಲ್ಲೂ ಅಧಿಕಾರಿಗಳೇ ಎಲ್ಲ ನಿರ್ಣಯ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಚುನಾಯಿತ ಪ್ರತಿನಿಧಿಗಳು ಕೇವಲ ಸ್ವ್ವಯಂಸೇವಕರಾಗಿ ಸೇವೆ ಸಲ್ಲಿಸುವ ಅನಿವಾರ್ಯತೆ.
ವರ್ಷ ಕಳೆಯಿತು: 2018ರ ಆ.31ರಂದು ದ.ಕ ಜಿಲ್ಲೆಯ 3 ಮತ್ತು ಉಡುಪಿಯ 4 ನಗರ ಸ್ಥಳೀಯ ಸಂಸ್ಥೆಗಳ ಸಹಿತ ರಾಜ್ಯದ 105 ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ದ.ಕ ಜಿಲ್ಲೆಯ 3 ನಗರ ಸ್ಥಳೀಯ ಸಂಸ್ಥೆಗಳಿಗೆ 2019ರ ಮೇ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಚುನಾವಣೆಗೆ ಮುನ್ನವೇ ಹಿಂದಿನ ಮೈತ್ರಿ ಸರ್ಕಾರ ಅಧ್ಯಕ್ಷ/ ಉಪಾಧ್ಯಕ್ಷರ ಮೀಸಲು ಪ್ರಕಟಿಸಿತ್ತು. ಚುನಾವಣೆ ನಡೆದ ಬಳಿಕ ಇದರಲ್ಲಿ ಕೆಲವು ಮೀಸಲು ಬದಲಾವಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಇನ್ನಷ್ಟೇ ವಿಚಾರಣೆ ಮುಗಿಯಬೇಕಿದೆ.
ಅಭಿವೃದ್ಧಿಗೆ ಹಿನ್ನಡೆ: ಪುತ್ತೂರು, ಉಳ್ಳಾಲ, ಉಡುಪಿ ನಗರಸಭೆ, ಬಂಟ್ವಾಳ, ಮೂಡುಬಿದಿರೆ, ಕುಂದಾಪುರ, ಕಾರ್ಕಳ ಪುರಸಭೆ, ಬೆಳ್ತಂಗಡಿ, ಸುಳ್ಯ, ಮೂಲ್ಕಿ, ಸಾಲಿಗ್ರಾಮ ಪಟ್ಣಣ ಪಂಚಾಯಿತಿಗೆ ಚುನಾವಣೆ ನಡೆದರೂ ಅಧ್ಯಕ್ಷರಿಲ್ಲದ ಸ್ಥಿತಿ.
ಒಂದೂವರೆ ವರ್ಷ ಕಳೆದರೂ ನಗರಸಭೆಯಲ್ಲಿ ಆಡಳಿತ ನಡೆಸುವುದು ಸಾಧ್ಯವಾಗಿಲ್ಲ. ನಾಗರಿಕರ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಲಾಕ್‌ಡೌನ್ ಸಂದರ್ಭ ಜನರಿಗೆ ಸೌಲಭ್ಯ ಒದಗಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದೇವೆ. ಶಾಸಕರ ವಾರ್‌ರೂಂ ಮೂಲಕ ಸಂಕಷ್ಟದಲ್ಲಿ ಇರುವವರಿಗೆ ದಿನಸಿ ಪೂರೈಸುತ್ತಿದ್ದೇವೆ. ನಗರಸಭೆಯ ಎಲ್ಲ ಚುನಾಯಿತ ಪ್ರತಿನಿಧಿಗಳು ಕೂಡಾ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಜಗನ್ನಿವಾಸ ರಾವ್, ಪುತ್ತೂರು ನಗರಸಭೆ ಚುನಾಯಿತ ಸದಸ್ಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷರ ಆಯ್ಕೆ ನಡೆಯದ ಕಾರಣ ಆಡಳಿತಾಧಿಕಾರಿ ನಿರ್ಣಯ ಕೈಗೊಳ್ಳಬೇಕಾಗಿದೆ. ಚುನಾಯಿತ ಸದಸ್ಯರ ಸಲಹೆ, ಸಹಕಾರ ಪಡೆದು ಆಯಾ ವಾರ್ಡ್‌ನಲ್ಲಿ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲಾಡಳಿತದ ಸೂಚನೆಯನ್ವಯ ಅವಶ್ಯ ಸ್ಥಳಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ವಿಶೇಷ ಸಂದರ್ಭ ಎಂದು ಪರಿಗಣಿಸಿ ಸದಸ್ಯರ ನಿಧಿಯಿಂದ ಅಕ್ಕಿ ಖರೀದಿಗೆ ಅವಕಾಶ ನೀಡಲಾಗಿದೆ. ಜೊತೆಯಲ್ಲಿ ದಾನಿಗಳು ಸಾಕಷ್ಟು ಅಕ್ಕಿ ಹಾಗೂ ಇತರ ದಿನಸಿ ಪೂರೈಸಿ ಸಹಕರಿಸಿದ್ದಾರೆ. ಡಾ.ಯತೀಶ್ ಉಳ್ಳಾಲ್ ಸಹಾಯಕ ಆಯುಕ್ತರು, ಪುತ್ತೂರು