ಉತ್ತಮ ಆಡಳಿತ ಮಂಡಳಿ ಚುನಾಯಿಸಿ

Elect a good governing body
ಚಿಕ್ಕ ಗಲಗಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ನಂದಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಮತ್ತು ಷೇರುದಾರರ ಚಿಂತನ-ಮಂಥನ ಸಭೆ ನಡೆಯಿತು. ಮನಾಲಿ ಶುಗರ್ಸ್‌ ಅಧ್ಯಕ್ಷ ಎಸ್.ಟಿ.ಪಾಟೀಲ, ಮುಖಂಡರಾದ ಅದೃಶ್ಯಪ್ಪ ದೇಸಾಯಿ, ಕುಮಾರ ದೇಸಾಯಿ, ಮಲ್ಲಪ್ಪ ಕಾಳಗಿ, ರಾಜೇಂದ್ರ ದೇಸಾಯಿ, ಎಚ್.ಎಸ್.ಕೋರಡ್ಡಿ ಇದ್ದರು.
Published on

ಬೀಳಗಿ: ನಂದಿ ಸಕ್ಕರೆ ಕಾರ್ಖಾನೆ ಅವಳಿ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಕೆಲವೇ ದಿನಗಳಲ್ಲಿ ಅದರ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾರ್ಖಾನೆ ಅಭಿವೃದ್ಧಿಗೆ ಸಮರ್ಥ ನಾಯಕತ್ವವುಳ್ಳ ನಿರ್ದೇಶಕ ಮಂಡಳಿ ಆಯ್ಕೆ ಮಾಡುವುದು ಷೇರುದಾರರ ಕೈಯಲ್ಲಿದೆ ಎಂದು ಮನಾಲಿ ಶುಗರ್ಸ್‌ ಅಧ್ಯಕ್ಷ ಎಸ್.ಟಿ.ಪಾಟೀಲ ಹೇಳಿದರು.

ಬೀಳಗಿ ಸಮೀಪದ ಚಿಕ್ಕಗಲಗಲಿ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಂದಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕ ಚುನಾವಣೆ ಪ್ರಯುಕ್ತ ಗುರುವಾರ ನಡೆದ ಅವಳಿ ಜಿಲ್ಲೆಯ ಕಬ್ಬು ಬೆಳೆಗಾರರ ಮತ್ತು ಷೇರುದಾರರ ಚಿಂತನ-ಮಂಥನ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಲು ಪ್ರತಿಯೊಬ್ಬ ಅನ್ನದಾತ ಹಾಗೂ ಎಲ್ಲ ಷೇರುದಾರರು ಮುಂದಾಗಬೇಕಾಗಿದೆ. ಉತ್ತಮ ನಿರ್ದೇಶಕ ಮಂಡಳಿ ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಕೈಯಲ್ಲಿದೆ. ಕಾರ್ಖಾನೆ ಬಗ್ಗೆ ಚಿಂತನೆ, ಕಬ್ಬು ಬೆಳೆಗಾರರು ಮತ್ತು ಷೇರುದಾರರಿಗೆ ಗೌರವ ಕೊಡುವಂತಹ ಸದಸ್ಯರನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಈಗಾಗಲೇ ಕುಮಾರ ದೇಸಾಯಿ ಅವರ ಪೆನಲ್ ಉತ್ತಮ ಕೆಲಸ ಮಾಡಿದೆ. ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಾಗಿದೆ ಎಂದರು.
ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಮುತ್ತು (ಅದೃಶ್ಯಪ್ಪ) ದೇಸಾಯಿ ಮಾತನಾಡಿ, ನಂದಿ ಸಕ್ಕರೆ ಕಾರ್ಖಾನೆಗೆ ಒಂದು ಇತಿಹಾಸ ಇದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಹಕ್ಕಾಗಿದೆ. ಕಾರ್ಖಾನೆ ಆಡಳಿತ ಮಂಡಳಿ ಕಾರ್ಯವೈಖರಿ ಮತ್ತು ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ನಿಲರ್ಕ್ಷೃದಿಂದ ಕಾರ್ಖಾನೆ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಈ ದಿಸೆಯಲ್ಲಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕಾರ್ಖಾನೆ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಾಗಿದೆ ಎಂದರು.

ನಂದಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಕುಮಾರ ದೇಸಾಯಿ ಮಾತನಾಡಿ, ಕಾರ್ಖಾನೆ ಅಭಿವೃದ್ಧಿಗೆ ಷೇರುದಾರರು ಮತ್ತು ಕಬ್ಬು ಬೆಳೆಗಾರರು ಗಟ್ಟಿಯಾಗಿ ನಿಲ್ಲಬೇಕು. ನಮ್ಮ ಪೆನಲ್‌ನಲ್ಲಿರುವ ಎಲ್ಲ ಸದಸ್ಯರ ಬೆಂಬಲಕ್ಕೆ ಮತದಾರರು ನಿಲ್ಲಬೇಕು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಕೆಲ ಅನ್ನದಾತರು ಹಾಗೂ ಷೇರುದಾರರು, ಚುನಾವಣೆ ಮಾಡಬೇಡಿ. ಎಲ್ಲ ಹಿರಿಯರು ಕೂಡಿಕೊಂಡು ಅವಿರೋಧವಾಗಿ ಆಯ್ಕೆ ಮಾಡಿದರೆ ಬಹಳ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜೇಂದ್ರ ದೇಸಾಯಿ, ಎಚ್.ಎಸ್.ಕೋರಡ್ಡಿ, ಬಸವರಾಜ ದೇಸಾಯಿ, ದೊಡ್ಡನಗೌಡ ದೇಸಾಯಿ, ಡಾ. ಕೆ.ಎಚ್.ಮುಂಬಾರಡ್ಡಿ, ಸಂಗಮೇಶ ಬಬಲೇಶ್ವರ, ಜಿಪಂ ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪಲಿಂಗನ್ನವರ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ, ಕೃಷ್ಣಗೌಡ ಪಾಟೀಲ, ಮಲ್ಲಿಕಾರ್ಜುನ ತೇಲಿ, ಎಸ್.ಎಲ್.ಜೀರಗಾಳ, ಆರ್.ಪಿ.ಕೊಡಬಾಗಿ, ಹುಸೇನಸಾಬ ಹೊಸೂರ, ಜಿಪಂ ಮಾಜಿ ಸದಸ್ಯ ಮಗಿಯಪ್ಪ ದೇವನಾಳ, ವೆಂಕಟೇಶ ನಾಯಕ, ಲಕ್ಷ್ಮಣ ಮೊಕಾಶಿ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net