ಹಿರಿಯರ ಕಡೆಗಣನೆ ಸಲ್ಲದು

23sgr3
ಸಾಗರದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಗುಂಡು ಎಸೆಯುವ ಮೂಲಕ ಕುಮಾರಸ್ವಾಮಿ ಕೊಪ್ಪ ಚಾಲನೆ ನೀಡಿದರು. ಡಿ.ಗಣಪತಪ್ಪ, ಉಮೇಶ್ ಹಿರೇನೆಲ್ಲೂರು, ಎಸ್.ಬಸವರಾಜ್, ನರಹರಿ ಇತರರಿದ್ದರು.
Published on

ಸಾಗರ: ಹಿರಿಯರು ಸಮಾಜದ ಆಸ್ತಿ ಇದ್ದಂತೆ. ಕಿರಿಯರು ಅವರ ಅನುಭವವನ್ನು ಬಳಸಿಕೊಂಡು ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಬೇಕು. ಹಿರಿಯರನ್ನು ಎಂದಿಗೂ ತಾತ್ಸಾರದಿಂದ ನೋಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ ಕೊಪ್ಪ ಕಿವಿಮಾತು ಹೇಳಿದರು.

ನಗರದ ಸಾಹಿತ್ಯ ಭವನ ಆವರಣದಲ್ಲಿ ಶನಿವಾರ ತಾಲೂಕು ನಿವೃತ್ತ ನೌಕರರ ಸಂಘವು ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
60 ವರ್ಷ ದಾಟಿದ ನಂತರ ನಾವು ಕೈಸೋತಿದ್ದೇವೆ ಎಂದು ಹಿರಿಯರು ಸ್ವಯಂಪ್ರೇರಿತವಾಗಿ ಮೂಲೆಗುಂಪಾಗಬಾರದು. ವಯಸ್ಸಿದಷ್ಟು ದಿನ ದುಡಿದು ಕುಟುಂಬವನ್ನು ರಕ್ಷಣೆ ಮಾಡಿದ ಹಿರಿಯರನ್ನು ಕಿರಿಯರು ಗೌರವದಿಂದ ನೋಡಿಕೊಳ್ಳಬೇಕು. ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರನ್ನು ಗೌರವಿಸುವ ದೊಡ್ಡ ಪರಂಪರೆಯೆ ಇದ್ದು, ಕಿರಿಯರು ಅದನ್ನು ಅನುಸರಿಸಬೇಕು. ಹಿರಿಯರನ್ನು ಸಕ್ರಿಯಗೊಳಿಸಲು ನಿವೃತ್ತ ನೌಕರರ ಸಂಘ ನಡೆಸುತ್ತಿರುವ ಇಂತಹ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಡಿ.ಗಣಪತಪ್ಪ ಮಾತನಾಡಿ, ನಿವೃತ್ತ ನೌಕರರ ಸಂಘ ಅತ್ಯಂತ ಕ್ರಿಯಾಶೀಲವಾಗಿ ವಿವಿಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದೆ. 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ, ಪುರುಷರಿಗೆ ಇಂತಹ ಸ್ಪರ್ಧಾತ್ಮಕ ಕಾರ್ಯಕ್ರಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಸ್.ಬಸವರಾಜ್, ಪ್ರಮುಖರಾದ ಕ್ಯಾಪ್ಟನ್ ನಾಗರಾಜ್, ಚೂಡಾಮಣಿ ರಾಮಚಂದ್ರ, ನರಹರಿ, ಗೀತಾ ದಳವಾಯಿ, ಸರೋಜಮ್ಮ, ಸೋಮರಾಜ್, ಸತ್ಯನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net