

ಮೈಸೂರು: ಕೆ.ಸಾಲುಂಡಿ ಗ್ರಾಮದಲ್ಲಿ ಕಾಲರಾದಿಂದ ಯುವಕನೊಬ್ಬ ಮೃತಪಟ್ಟ ಸುದ್ದಿ ತಣ್ಣಗಾಗುವ ಮೊದಲೇ ತಾಲೂಕಿನ ಮಾರ್ಬಳ್ಳಿ ಗ್ರಾಮದಲ್ಲಿ ವಾಂತಿ ಹಾಗೂ ಭೇದಿಯಿಂದಾಗಿ ವೃದ್ಧೆಯೊಬ್ಬರು ಮೃತಪಟ್ಟಿದ್ದು, ಗ್ರಾಮದ 39 ಜನ ಅಸ್ವಸ್ಥರಾಗಿದ್ದಾರೆ.
ಗ್ರಾಮದ ಶಿವಮ್ಮ (65) ಮೃತಪಟ್ಟ ವೃದ್ಧೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾರ್ಬಳ್ಳಿ ಗ್ರಾಮದಲ್ಲಿ ಶುಕ್ರವಾರ ಗೃಹ ಪ್ರವೇಶ ಕಾರ್ಯಕ್ರಮ ನಡೆದಿದ್ದು, ಗ್ರಾಮದ ಬಹುತೇಕರು ಕಾರ್ಯಕ್ರಮದಲ್ಲಿ ಊಟ ಸೇವಿಸಿದ್ದರು ಎನ್ನಲಾಗಿದೆ. ನಂತರ ಹಲವರಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಗ್ರಾಮದ 39ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು, 30ಕ್ಕೂ ಹೆಚ್ಚು ಮಂದಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರ್ಯಕ್ರಮದಲ್ಲಿ ಸುಮಾರು 300 ಕ್ಕು ಹೆಚ್ಚು ಜನ ಊಟ ಮಾಡಿದ್ದು, ಮಾರ್ಬಳ್ಳಿ ಹೊರತು ಪಡಿಸಿ ಬೇರೆ ಗ್ರಾಮದಿಂದಲೂ ಜನ ಬಂದಿದ್ದರು. ಬೇರೆ ಗ್ರಾಮದ ಯಾರಲ್ಲೂ ಈ ಲಕ್ಷಣ ಕಾಣಿಸಿಕೊಂಡಿಲ್ಲ. ಜತೆಗೆ, ಮಾರ್ಬಳ್ಳಿ ಗ್ರಾಮದ ಊಟ ಸೇವಿಸದ ಹಲವು ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಇವರಲ್ಲಿ 27 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜತೆಗೆ ಗ್ರಾಮದಲ್ಲಿ ತುರ್ತು ಚಿಕಿತ್ಸೆಗಾಗಿ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ.