ವೃದ್ಧನ ಅಂಗಾಂಗ ದಾನ

moganna jss
Published on


ಮೈಸೂರು: ಮಿದುಳು ನಿಷ್ಕ್ರಿಯಗೊಂಡ ವೃದ್ಧನ ಅಂಗಾಂಗ ದಾನ ಮಾಡುವ ಮೂಲಕ ಐದು ಜನರ ಪ್ರಾಣ ಉಳಿಸಿ ಮಾನವೀಯತೆ ಮೆರೆಯಲಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಗಂಜಿಗೆರೆ ಗ್ರಾಮದ ಮೊಗಣ್ಣೇಗೌಡ(67) ಅವರು ಐದು ಜನರ ಬಾಳಿಗೆ ಬೆಳಕಾದವರು.


ಮೊಗಣ್ಣೇಗೌಡ ಅವರು ತೀವ್ರ ರಕ್ತಸ್ರಾವದಿಂದ ಅ.23 ರಂದು ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಮೊಗಣ್ಣೇಗೌಡರ ಮಿದುಳು ನಿಷ್ಕ್ರಿಯಗೊಂಡ ಬಗ್ಗೆ ಹಾಗೂ ಬದುಕುಳಿಯುವ ಸಾಧ್ಯತೆ ಬಗ್ಗೆ ರೋಗಿಯ ಸಂಬಂಧಿಕರಿಗೆ ವಿವರಿಸಿದರು.

ಅಂಗಾಂಗ ದಾನ ಮಾಡಲು ಮೊಗಣ್ಣೇಗೌಡ ಕುಟುಂಬದವರು ಒಪ್ಪಿಗೆ ಸೂಚಿಸಿದರು. ವಿವಿಧ ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂಬುದನ್ನು ಖಚಿತಪಡಿಸಿಕೊಳ್ಳಲಾಯಿತು. ಬಳಿಕ ಸರ್ಕಾರಿ ಮಾರ್ಗಸೂಚಿ ಪ್ರಕಾರ ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಯಿತು.

ವೈದ್ಯರ ತಂಡ ರೋಗಿಯ ಎರಡು ಕಾರ್ನಿಯಾ, ಎರಡು ಕಿಡ್ನಿ ಮತ್ತು ಲಿವರ್ ತೆಗೆದು, ಒಂದು ಕಿಡ್ನಿ ಮತ್ತು 2 ಕಾರ್ನಿಯಾಗಳನ್ನು ಅವಶ್ಯಕತೆಯಿದ್ದ ರೋಗಿಗಳಿಗೆ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕಸಿ ಮಾಡಿದರು. ಒಂದು ಕಿಡ್ನಿ ಮತ್ತು ಲಿವರ್‌ನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net