

ಶಿವಮೊಗ್ಗ: ನಗರದ ಗಾಂಧಿನಗರ ಬಡಾವಣೆಯ 88 ವರ್ಷದ ವೃದ್ಧರೊಬ್ಬರಿಗೆ ಡಿಜಿಟಲ್ ಅರೆಸ್ಟ್ ಮಾಡಿ 17.60 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ವಾಟ್ಸ್‌ಆ್ಯಪ್‌ಗೆ ವಿಡಿಯೋ ಕರೆ ಮಾಡಿ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ ಮುಂಬಯಿ ನಗರದ ಕೊಲಾ ಪೊಲೀಸ್ ಠಾಣೆಯವರೆಂದು ಪರಿಚಯಿಸಿಕೊಂಡಿದ್ದ. ಅಪರಿಚಿತ ವ್ಯಕ್ತಿಯೊಬ್ಬರ ಫೋಟೊ ಕಳುಹಿಸಿ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ. ಬಹುದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗಿದೆ. ಹೀಗಾಗಿ ತಮಗೆ ವಾರಂಟ್ ಜಾರಿಗೊಳಿಸಲಾಗಿದೆ ಎಂದು ಬೆದರಿಸಿದ್ದ.
ನಂತರ ವಾರೆಂಟ್‌ನ ಪಿಡಿಎಫ್ ಪ್ರತಿಯನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ. ಅಲ್ಲದೆ, ಬ್ಯಾಂಕ್ ಖಾತೆ ಮುಟ್ಟುಗೋಲು ಮಾಡಬೇಕಾಗಿರುವುದರಿಂದ ಖಾತೆಯಲ್ಲಿರುವ ಹಣವನ್ನು ನಿರ್ದೇಶಿಸುವ ಖಾತೆಗೆ ವರ್ಗಾಯಿಸಬೇಕು. ತನಿಖೆಯಲ್ಲಿ ನಿರಪರಾಧಿ ಎಂಬುದು ಸಾಬೀತಾದರೆ ಹಣ ಹಿಂದಿರುಗಿಸಲಾಗುವುದು ಎಂದು ಹೇಳಿದ್ದ.
ಆನಂತರ ಹಂತಹಂತವಾಗಿ ಆತ ನಿರ್ದೇಶಿಸಿದ ಖಾತೆಗೆ 12.30 ಲಕ್ಷ ರೂ., 5.30 ಲಕ್ಷ ರೂ.ಗಳನ್ನು ವೃದ್ಧ ವರ್ಗಾಯಿಸಿದ್ದರು. ನಂತರ ಅನುಮಾನ ಬಂದು ಸಂಬಂಧಿಕರ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಶಿವಮೊಗ್ಗ ಸಿಇಎನ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನೀಡಿದ್ದಾರೆ.