

ಹುಬ್ಬಳ್ಳಿ: ವಿಶ್ವ ತಂದೆಯರ ದಿನ ನಿಮಿತ್ತ 50 ವರ್ಷ ಮೇಲ್ಪಟ್ಟವರಿಗೆ ನಗರದ ಶ್ರೀ ಬಾಲಾಜಿ ನರರೋಗ ಮತ್ತು ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಭಾನುವಾರ ಎಲುಬು ಮತ್ತು ನರ ರೋಗಗಳಿಗೆ ಸಂಬಂಧಿಸಿದಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಡಾ. ಅಭಯಾಂಬಿಕಾ, ಡಾ. ಅಖಿಲೇಶ ಜೋಶಿ ಅವರು ಆರೋಗ್ಯ ತಪಾಸಣೆ ನಡೆಸಿ, ವಯಸ್ಸಾದಂತೆ ಮನುಷ್ಯನಲ್ಲಿನ ರೋಗ ನಿರೋಧಕ ಶಕ್ತಿ ಕುಂಠಿತವಾಗಲಿದೆ. ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಹಿರಿಯರು ತಮ್ಮ ವಯಸ್ಸಿಗೆ ಅನುಗುಣವಾಗಿ ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ, ನಡಿಗೆ ಇತ್ಯಾದಿ ಕ್ರಿಯಾಚಟುವಟಿಕೆಗಳ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಧುಮೇಹ, ರಕ್ತದೊತ್ತಡ, ದೇಹತೂಕ ಪರಿಶೀಲನೆ, ಎಲುಬು ಮತ್ತು ನರರೋಗಗಳಿಗೆ ಸಂಬಂಧಿಸಿದಂತೆ ತಪಾಸಣೆ ಮಾಡಿ ಆರೋಗ್ಯದ ಬಗ್ಗೆ ಕೆಲ ಟಿಪ್ಸ್ ನೀಡಲಾಯಿತು.