ಪತ್ರಿಕಾ ವಿತರಕರ ಕೆಲಸ ಅತ್ಯಂತ ಮಹತ್ವದ್ದು: ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬಣ್ಣನೆ

5
Published on

ಮೈಸೂರು: ಮನುಷ್ಯರ ಜೀವನದ ದಿನನಿತ್ಯ ದಾಖಲೆಗಳನ್ನು ಎಲ್ಲೆಡೆ ತಲುಪಿಸುವ ಪತ್ರಿಕಾ ವಿತರಕರ ಕೆಲಸ ಅತ್ಯಂತ ಮಹತ್ವದ್ದು ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬಣ್ಣಿಸಿದರು.
ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ 7ನೇ ವಾರ್ಷಿಕೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ವರ್ಷದ ದಿನದರ್ಶಿಕೆ, ಪತ್ರಿಕಾ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನೊಂದವರಿಗೆ ನೆರವು, ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಬದುಕಿಗೂ ಪತ್ರಿಕೆಗೂ ಅವಿನಾಭಾವ ಸಂಬಧವಿದೆ. ಮನುಷ್ಯರ ಜೀವನದ ದಿನನಿತ್ಯ ದಾಖಲೆಗಳನ್ನು ಎಲ್ಲೆಡೆ ತಲುಪಿಸುವ ಪತ್ರಿಕಾ ವಿತರಕರ ಕೆಲಸ ಅತ್ಯಂತ ಮಹತ್ವದ್ದು. ಪತ್ರಿಕಾ ವಿತರಕರು ಮತ್ತು ಅವರ ಮಕ್ಕಳಿಗೆ ನೀವು ಪ್ರತಿಭಾ ಪುರಸ್ಕಾರವನ್ನು ಕೊಡುವುದು ಉತ್ತಮ ಜವಾಬ್ದಾರಿಯುತ ಕೆಲಸ ಎಂದು ಹೇಳಿ ಪ್ರಶಂಸೆ ವ್ಯಕ್ತಪಡಿಸಿದರು
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಸಮಯ ಮತ್ತು ಶ್ರಮಕ್ಕೆ ಪ್ರಾಮುಖ್ಯತೆಯಿರುವ ಪತ್ರಿಕಾ ವಿತರಕರ ಕೆಲಸಕ್ಕೆ ಎಲ್ಲರ ಮೆಚ್ಚುಗೆ ಬೇಕು. ನಗರದಲ್ಲಿ ಪತ್ರಿಕಾ ವಿತರಕರ ಕಾರ್ಯನಿರ್ವಹಣೆಗೆ ಸೂಕ್ತ ಜಾಗ ಬೇಕು ಎಂಬ ಬೇಡಿಕೆಯಿದೆ. ಈ ಬಗ್ಗೆ ನಾವೂ ಪ್ರಯತ್ನಿಸುತ್ತಿದ್ದು, ಶೀರ್ಘದಲ್ಲಿಯೇ ಕಾರ್ಯಗತ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಗರದಲ್ಲಿ ಸಾವಿರದಷ್ಟು ಪತ್ರಿಕಾ ವಿತರಕರಿದ್ದು, ಇವರಿಗಾಗಿ ಸಹಕಾರ ಸಂಘ ಸ್ಥಾಪನೆಗೆ ಮುಂದಾಗಬೇಕು. ಜತೆಗೆ ಇವರಿಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ಸೌಲಭ್ಯ ಸಿಗಬೇಕಾಗಿದ್ದು, ಈ ನಿಟ್ಟಿನಲ್ಲಿ ಸಂಘ ಪ್ರಯತ್ನಿಸಲಿ ಎಂದು ಸಲಹೆ ನೀಡಿದರು.
ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ಪತ್ರಿಕಾ ವಿತರಕರನ್ನು ಮುನ್ನೆಲೆಗೆ ತರಲು ಒಕ್ಕೂಟ ಪ್ರಯತ್ನಿಸುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಇವರಿಗೆ ವಿಮೆ ಒದಗಿಸುವ ಸೌಲಭ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದೆ. ಇದಲ್ಲದೆ ಮುಂದಿನ ಬಜೆಟ್‌ನಲ್ಲಿ ಪತ್ರಿಕಾ ವಿತರಕರ ಸೌಲಭ್ಯಕ್ಕಾಗಿ ಕ್ಷೇಮನಿಧಿ ಆರಂಭಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಎದೆಗುಂದದೆ ನಿರಂತರವಾಗಿ ಪತ್ರಿಕೆ ತಲುಪಿಸುವ ದಿಟ್ಟ ಕೆಲಸ ಪತ್ರಿಕಾ ರಂಗದ ಶಕ್ತಿಯನ್ನು ಹೆಚ್ಚಿಸಿತು ಎಂದರು.
ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಪಿ.ಸುರೇಶ್, ಪ್ರಧಾನ ಕಾರ್ಯದರ್ಶಿ ಎ.ರವಿ, ಉಪಾಧ್ಯಕ್ಷರಾದ ಎಸ್.ಶಾಂತೇಶ್, ಕೆ.ಎನ್.ವೆಂಕಟೇಶ್‌ಬಾಬು, ಜಂಟಿ ಕಾರ್ಯದರ್ಶಿಗಳಾದ ಜೆ.ಚಂದ್ರಶೇಖರ್, ಬಿ.ವೇಣುಗೋಪಾಲ್, ಖಜಾಂಚಿ ಎಂ.ಎನ್.ಪ್ರಕಾಶ್, ನಿರ್ದೇಶಕರಾದ ಕೆ.ಎಂ. ಸಂತೋಷ, ಕೆ.ಕೆ.ಕೃಷ್ಣಕುಮಾರ್, ಎಸ್.ಬಿ. ವಿಶ್ವಾಸ್ ಇತರರು ಇದ್ದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಿಕಾ ವಿತರಕ ಜವರಪ್ಪ ಅವರನ್ನು ಸಂಘದಿಂದ ಅಭಿನಂದಿಸಲಾಯಿತು. ಮೈಸೂರಿನ ಪತ್ರಿಕ ವಿತರಕ ಸುದರ್ಶನ್ ಅವರಿಗೆ ಆರೋಗ್ಯದ ದೃಷ್ಟಿಯಿಂದ ಆರ್ಥಿಕ ನೆರವು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net