ಕೈ ಸೇರದ ‘ಗೃಹಲಕ್ಷ್ಮಿ’ ಹಣ, ಖಾತೆಗೆ ಬಾರದ ಎರಡನೇ ಕಂತು

gruhalakshmi-2nd-installment
Published on

ಆರ್.ಕೃಷ್ಣ ಮೈಸೂರು
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಡಿ ಮೊದಲ ತಿಂಗಳು 2 ಸಾವಿರ ರೂ. ಪಡೆದು ಸಂತಸದಲ್ಲಿದ್ದ ಗೃಹಲಕ್ಷ್ಮೀಯರು, ಎರಡನೇ ಕಂತಿನ ಹಣ ಖಾತೆ ಸೇರದೆ ಇರುವುದರಿಂದ ಬೇಸರ ಹೊರ ಹಾಕುತ್ತಿದ್ದಾರೆ.
ಪ್ರತಿ ತಿಂಗಳು ಖಾತೆಗೆ ಹಣ ಬರಲಿದೆ ಅಂದುಕೊಂಡಿದ್ದ ಮಹಿಳೆಯರು ಎರಡನೇ ತಿಂಗಳ ಕಂತು ಬಾರದಿದ್ದರಿಂದ ಬ್ಯಾಂಕ್, ಗ್ರಾಮ ಒನ್ ಕೇಂದ್ರಗಳಿಗೆ ಅಲೆಯುಂತವಾಗಿದೆ. ಖಾತೆಗೆ ಹಣ ಬಂದವರು ಮುಗುಳುನಕ್ಕರೆ, ಹಣ ಬಾರದವರು ಪೆಚ್ಚುಮೋರೆ ಹಾಕಿಕೊಂಡು ಹಣ ಬರುವುದೇ ಎಂದು ಕಾಯುವಂತಾಗಿದೆ.
ಜಿಲ್ಲೆಯಲ್ಲಿ ಒಟ್ಟು 6,56,846 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ತಮ್ಮ ಹೆಸರನ್ನು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 6,12,495 ಜನರ ಖಾತೆಗಳಿಗೆ ತಲಾ 2 ಸಾವಿರದಂತೆ ನೇರವಾಗಿ ಒಟ್ಟು 122.50 ಕೋಟಿ ರೂ. ಜಮೆ ಆಗಿದೆ. ಆದರೆ ನಾನಾ ಕಾರಣಗಳಿಂದ 44,351 ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ. ತಲಾ 2 ಸಾವಿರದಂತೆ ಜಿಲ್ಲೆಗೆ ಒಟ್ಟು 124.36 ಕೋಟಿ ರೂ. ಬಿಡುಗಡೆಯಾಗಿದ್ದು, 1.86 ಕೋಟಿ ರೂ. ಖಾತೆಗೆ ಜಮೆ ಆಗದೆ ಬಾಕಿ ಉಳಿದಿದೆ.
ಕೆಲವರಿಗೆ ಎಲ್ಲ ದಾಖಲೆಗಳನ್ನು ಸಲ್ಲಿಸಿಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿ ಲಾಗಿನ್‌ನಲ್ಲಿ ಮಂಜೂರಾಗದೆ ಬಾಕಿ ಇದ್ದರೆ, ಕೆಲವರಿಗೆ ಐಡಿ ವ್ಯಾಲಿಡೇಶನ್ ಮತ್ತು ಆಧಾರ್ ಸೀಡಿಂಗ್ ಸಮಸ್ಯೆ, ವ್ಯಾಲಿಡೇಶನ್ ಫೇಲ್ ಆಗಿರುವುದು ಸೇರಿದಂತೆ ನಾನಾ ಸಮಸ್ಯೆಗಳನ್ನು ದಾಖಲೆಯಲ್ಲಿ ತೋರಿಸಲಾಗುತ್ತಿದೆ.
ಅಲ್ಲದೆ ಇ-ಕೆವೈಸಿ ಮಾಡಿಸದಿರುವುದು, ಬ್ಯಾಂಕ್ ಖಾತೆಯೊಂದಿಗೆ ಆಧಾರ್, ಮೊಬೈಲ್ ನಂಬರ್ ಲಿಂಕ್ ಆಗದಿರುವುದು, ಸೀಡಿಂಗ್, ಕೆವೈಸಿ ವ್ಯಾಲಿಡೇಶನ್ ಆಗದೆ ಇರುವುದು, ಸಿಡಿಪಿ ಲಾಗಿನ್‌ನಲ್ಲಿ ಬಿಲ್ ಜನರೇಟ್ ಆಗದಿರುವುದು ಮುಖ್ಯ ಕಾರಣವಾಗಿದ್ದು, ಇದರಿಂದ ಫಲಾನುಭವಿಗಳು ಅರ್ಹರಾಗಿದ್ದರೂ 2 ತಿಂಗಳಿನಿಂದ ಖಾತೆಗೆ ಗೃಹಲಕ್ಷ್ಮಿ ಹಣ ವರ್ಗಾವಣೆಯಾಗಿಲ್ಲ. ಕೆಲವರಿಗೆ ಒಂದು ತಿಂಗಳು ಹಣ ಬಂದಿದ್ದು, ಎರಡನೇ ತಿಂಗಳಿನಲ್ಲಿ ಹಣ ಖಾತೆಗೆ ವರ್ಗಾವಣೆ ಆಗಿಲ್ಲ. ಇನ್ನೂ ಕೆಲವರಿಗೆ ಒಂದೂ ತಿಂಗಳ ಹಣವೂ ಕೈ ಸೇರಿಲ್ಲ.

ಯಾರನ್ನು ಕೇಳಬೇಕು ಎನ್ನುವ ಗೊಂದಲ:
ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಯಾರನ್ನು ಕೇಳಬೇಕು ಎನ್ನುವ ಗೊಂದಲ ಸದ್ಯ ಮಹಿಳೆಯರನ್ನು ಕಾಡುತ್ತಿದೆ. ಗೃಹಲಕ್ಷ್ಮಿ ಯೋಜನೆ ನೋಂದಣಿ ಕೆಲಸವನ್ನು ಖಾಸಗಿ ಏಜೆನ್ಸಿಯವರಿಗೆ ನೀಡಿದ್ದರಿಂದ ಕಂಪ್ಯೂಟರ್ ಸೆಂಟರ್‌ಗೆ ಹೋಗಿ ಕೇಳಿದರೆ ಬಾಪೂಜಿ, ಅಟಲ್ ಕೇಂದ್ರ, ಗ್ರಾಮ ಒನ್, ಮೈಸೂರು ಒನ್‌ಗೆ ಹೋಗಿ ಕೇಳಿ ಎನ್ನುವ ಉತ್ತರ ಬರುತ್ತಿದೆ. ಅಲ್ಲಿಗೂ ಹೋಗಿ ವಿಚಾರಿಸಿದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒಗಳನ್ನು ಸಂಪರ್ಕಿಸುವಂತೆ ಹೇಳಲಾಗುತ್ತಿದೆ. ಜತೆಗೆ, ಬ್ಯಾಂಕ್‌ಗೆ ಹೋಗಿ ಪರಿಶೀಲಿಸಿ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಅಪ್‌ಡೇಟ್, ಹೊಸ ಕಾರ್ಡ್‌ಗಳಿಗೆ ಇಲ್ಲ:
ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದ ಬಳಿಕ ನಿಷ್ಕ್ರಿಯಗೊಂಡಿದ್ದ ಸಾಕಷ್ಟು ಬಿಪಿಎಲ್, ಎಪಿಎಲ್ ಕಾರ್ಡ್‌ಗಳನ್ನು ಅಪ್‌ಡೇಟ್ ಮಾಡಿಸಲಾಗಿದೆ. ಹಲವರು ಹೊಸ ಕಾರ್ಡ್ ಪಡೆದಿದ್ದರೆ, ಕೆಲವರು ತಾವು ಪ್ರತ್ಯೇಕವಾಗಿ ಇರುವುದಾಗಿ ದಾಖಲೆ ತೋರಿಸಿ ಮತ್ತೊಂದು ಕಾರ್ಡ್ ಪಡೆದಿದ್ದಾರೆ.
ಆದರೆ ಹೀಗೆ ಕಾರ್ಡ್ ಪಡೆದವರ ದಾಖಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಇದ್ದರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಜೋಡಣೆ ಮಾಡಿಲ್ಲ. ಇದರಿಂದ ಸರ್ಕಾರದ ಯೋಜನೆಯಡಿ ಫಲಾನುಭವಿಗಳಾಗಲು ಅರ್ಹರಿದ್ದರೂ ಗೃಹಲಕ್ಷ್ಮಿಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಈ ಮೊದಲೇ ದಾಖಲೆ ಸಂಗ್ರಹಿಸಿದ್ದ ರಾಜ್ಯದ ಒಟ್ಟಾರೆ 1.28 ಕೋಟಿ ಕಾರ್ಡ್‌ದಾರರಲ್ಲಿ 1.10 ಕೋಟಿ ಜನರ ದಾಖಲೆಯನ್ನು ಗೃಹಲಕ್ಷ್ಮಿಯೋಜನೆಯಡಿ ಗುರುತಿಸಲಾಗಿತ್ತು. ಬಳಿಕ 18 ಲಕ್ಷಕ್ಕೂ ಹೆಚ್ಚು ಜನರು ಕಾರ್ಡ್‌ಗಳನ್ನು ಸಕ್ರಿಯಗೊಳಿಸಿದ್ದರೂ ಅವರ ದಾಖಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಜೋಡಣೆ ಆಗದೆ ಇರುವ ಪರಿಣಾಮ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯದಿಂದ ವಂಚಿತರಾಗುವಂತಾಗಿದೆ.

ನಿತ್ಯ 20 ಸಾವಿರ ಜನರಿಗೆ ವರ್ಗಾವಣೆ:
ಮೊದಲ ತಿಂಗಳು ಏಕಕಾಲಕ್ಕೆ ಗೃಹಲಕ್ಷ್ಮಿಯೋಜನೆ ಹಣವನ್ನು ವರ್ಗಾವಣೆ ಮಾಡಿದ್ದರಿಂದ ಕೆಲ ಗೊಂದಲ ಉಂಟಾಗಿತ್ತು. ಸರ್ವರ್ ಸಮಸ್ಯೆಯೂ ಉಂಟಾಗಿತ್ತು. ಹೀಗಾಗಿ ಜಿಲ್ಲಾವಾರು ಫಲಾನುಭವಿಗಳ ಖಾತೆಗೆ ಹಣವನ್ನು ಸರದಿಯಲ್ಲಿ ಹಾಕಲಾಗುತ್ತಿದೆ. ಅಲ್ಲದೆ, ಬ್ಯಾಂಕ್‌ವಾರು ನಿತ್ಯ 20 ಸಾವಿರ ಜನರ ಖಾತೆಗೆ ಹಣ ಜಮೆ ಆಗುತ್ತಿದೆ. ಆದ್ದರಿಂದ ಯಾರೂ ಹಣ ಬಂದಿಲ್ಲವೆಂದು ಗೊಂದಲಕ್ಕೆ ಒಳಗಾಗಬಾರದು. ಹಂತ ಹಂತವಾಗಿ ಎಲ್ಲರ ಖಾತೆಗೂ ಹಣ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೀಘ್ರವೇ ಎಲ್ಲರಿಗೂ ಯೋಜನೆಯ ಲಾಭ ದೊರೆಯಲಿದೆ
ನಾನಾ ಕಾರಣಗಳಿಂದ ಕೆಲವರ ಖಾತೆಗೆ ಗೃಹಲಕ್ಷ್ಮಿಯೋಜನೆಯ ಸೌಲಭ್ಯ ತಲುಪಿಲ್ಲ. ಕೆಲವರ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಸಿಡಿಪಿ ಲಾಗಿನ್‌ನಲ್ಲಿ ದಾಖಲೆ ಹೊಂದಾಣಿಕೆ ಆಗುತ್ತಿಲ್ಲ. ಇದರಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಿರುವುದಿಲ್ಲ. ರಾಜ್ಯ ಮಟ್ಟದಲ್ಲಿ ಗೊಂದಲ ಪರಿಹರಿಸುವ ಪ್ರಕ್ರಿಯೆ ಮುಂದುವರಿದಿದ್ದು, ಶೀಘ್ರವೇ ಎಲ್ಲರಿಗೂ ಯೋಜನೆಯ ಲಾಭ ದೊರೆಯಲಿದೆ.
ಬಸವರಾಜು
ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net