

ಮೈಸೂರು: ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಬಿಸಿಯೂಟ ಕಾರ್ಮಿಕರ ಪ್ರಥಮ ರಾಜ್ಯ ಸಮ್ಮೇಳನವನ್ನು ಅ.13 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಧ್ಯಕ್ಷ ಕೆ.ವಿ.ಭಟ್ ತಿಳಿಸಿದರು.
ಅಕ್ಷರ ದಾಸೋಹ ಯೋಜನೆ ಕಾನೂನಾತ್ಮಕವಾಗಿ ದೇಶಾದ್ಯಂತ ಜಾರಿಯಲ್ಲಿದೆ. ಸುಪ್ರೀಂಕೋರ್ಟ್ ಈ ಯೋಂಜನೆ ಮಹತ್ವವನ್ನು ಸಾರಿ ಹೇಳಿದೆ. ಆದರೂ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ, ಆರೋಗ್ಯ ರಕ್ಷಣೆ, ಇಪಿಎಫ್, ಇಎಸ್‌ಐ, ನಿವೃತ್ತಿ ನಂತರ ಪಿಂಚಣಿ, ಹೆರಿಗೆ ರಜೆ, ಸಮವಸ್ತ್ರ, ಗುರುತಿನ ಚೀಟಿ ನೀಡಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸರ್ಕಾರ ನಾನಾ ನೆಪ ಹೇಳಿ ರಾಜ್ಯದಾದ್ಯಂತ ಸುಮಾರು 9 ಸಾವಿರ ಜನರನ್ನು ಯಾವುದೇ ನಿವೃತ್ತಿ ಸೌಲಭ್ಯ ನೀಡದೆ ಮನೆಗೆ ಕಳುಹಿಸಿದೆ. ಎಲ್ಲರಿಗೂ ತಲಾ 5 ಲಕ್ಷ ರೂ. ಇಡುಗಂಟು ನೀಡಬೇಕೆಂದು ಹೋರಾಟಗಳು ನಡೆಯುತ್ತಿವೆ. ಆದರೂ ಸರ್ಕಾರ ನಿರ್ಲಕ್ಷಿಸಿದೆ. ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಮತ್ತು ಬಿಸಿಯೂಟ ಕಾರ್ಮಿಕರ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಮೈಸೂರಿನಿಂದ 250 ರಿಂದ 300 ಜನ ಹಾಗೂ ರಾಜ್ಯದ ನಾನಾ ಭಾಗದಿಂದ 7 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಎಐಯುಟಿಯುಸಿ ಜಿಲ್ಲಾ ಮುಖಂಡರಾದ ಪಿ.ಎಸ್.ಸಂಧ್ಯಾ, ಎಸ್.ಎಚ್.ಹರೀಶ್, ದೇವಮಣಿ, ರೂಪಾ, ಪ್ರೇಮಾ, ಮಧುಮತಿ, ಭಾಗ್ಯಾ ಇದ್ದರು.