ವಿಜಯಪುರ: ಸಾರ್ವಜನಿಕ ವಿತರಣಾ ಪದ್ಧತಿಯ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಅನ್ನ ಯೋಜನೆ ಹಾಗೂ ಬಿಪಿಎಲ್ ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರುಗಳು ಕಡ್ಡಾಯವಾಗಿ ಜೂ. 30 ರೊಳಗೆ ಇ&ಕೆವೈಸಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಾದ್ಯಂತ ಸದ್ಯ ಚಾಲ್ತಿಯಲ್ಲಿರುವ ಅಂತ್ಯೋದಯ ಅನ್ನ ಯೋಜನೆಯ 40,987 ಹಾಗೂ ಆದ್ಯತಾ ಕುಟುಂಬ (ಬಿಪಿಎಲ್) ಪಡಿತರ ಚೀಟಿ 4,68,280 ರಿದಂತೆ ಒಟ್ಟಾರೆ, 5,09,267 ಪಡಿತರ ಚೀಟಿಗಳ ಪೈಕಿ 4,82,741 ಪಡಿತರ ಚೀಟಿಗಳಲ್ಲಿನ 18,01,480 ಸದಸ್ಯರ ಇ&ಕೆವೈಸಿ ಆಗಿರುತ್ತದೆ.
ಇನ್ನೂ ಇ&ಕೆವೈಸಿ ಆಗದೇ ಇರುವ 26,526 ಪಡಿತರ ಚೀಟಿಗಳಲ್ಲಿನ 35,162 ಸದಸ್ಯರು ಇ&ಕೆವೈಸಿ ಮಾಡಿಕೊಳ್ಳಬೇಕಿದೆ. ಇ&ಕೆವೈಸಿ ಮಾಡಿಕೊಳ್ಳುವಂತೆ ಕಳೆದ 3 ವರ್ಷಗಳಿಂದ ಸಾರ್ವಜನಿಕವಾಗಿ ಸಾಕಷ್ಟು ಪ್ರಚಾರ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಇನ್ನೂ ಸುಮಾರು 35,162 ಸದಸ್ಯರು ಇ&ಕೆವೈಸಿ ಮಾಡಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ನೈಜ ಫಲಾನುಭವಿಗಳು ಪಡಿತರ ಪಡೆಯುವುದರಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಇದು ಕೊನೆಯ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇ&ಕೆವೈಸಿ ಮಾಡಿಸದೆ ಇರುವ ಸದಸ್ಯರುಗಳು ತಮ್ಮ ಹತ್ತಿರದ ನ್ಯಾಯ ಬೆಲೆ ಅಂಗಡಿಗಳಿಗೆ ತೆರಳಿ ಜೂ. 30 ರೊಳಗಾಗಿ ಇ&ಕೆವೈಸಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.