ನೋಡಲು ಚೆಂದ ಏಕಲವ್ಯ ಆನೆಯ ತುಂಟಾಟ..!

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಅರಮನೆ ಅಂಗಳದಲ್ಲಿ ಗಮನ ಸೆಳೆಯುತ್ತಿದೆ ಏಕಲವ್ಯನ ನಲಿದಾಟ, ತುಂಟಾಟ, ಚಿನ್ನಾಟ…!


ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿರುವ ಏಕಲವ್ಯ ಆನೆಯ ಸಂಭ್ರಮದ ಕ್ಷಣಗಳು ಕಾಣ ಸಿಗುತ್ತಿರುವುದು ಹೀಗೆ…


ಈ ಆನೆಗೆ ಎಲ್ಲವೂ ಹೊಸದು. ಗಜಪಯಣ, ಅರಮನೆ ಸ್ವಾಗತದ ಸಡಗರ, ಸಾಂಸ್ಕೃತಿಕ ನಗರಿ ವಾತಾವರಣ, ನಿತ್ಯದ ತಾಲೀಮು, ಜನಜಂಗುಳಿ, ರಾಜಾತಿಥ್ಯ…ಹೀಗೆ ಇಲ್ಲಿಯ ಪ್ರತಿ ಘಳಿಗೆ, ಚಟುವಟಿಕೆಯೂ ಇದಕ್ಕೆ ನವನವೀನವೇ. ಈ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗಿಯಾಗುವ ಮೂಲಕ ಏಕಲವ್ಯ ಉಲ್ಲಾಸಗೊಂಡಿದ್ದಾನೆ.


ಕಾಡಿನಿಂದ ಮೊದಲ ಬಾರಿಗೆ ನಾಡಿಗೆ ಬಂದಿರುವ 39 ವರ್ಷದ ಏಕಲವ್ಯ, ಮೈಸೂರಿನ ವಾತಾವರಣಕ್ಕೆ ಬಹುಬೇಗ ಹೊಂದಿಕೊಂಡಿದ್ದು, ಇದರೊಂದಿಗೆ ‘ದಸರೆಗೆ ನಾನು ಸಜ್ಜು’ ಎಂಬ ಸಂದೇಶ ರವಾನೆ ಮಾಡಿದ್ದಾನೆ.


ಗಜಪಡೆಯ ಉಳಿದ ಸಂಗಾತಿಗಳೊಂದಿಗೆ ಸುಲಭವಾಗಿ ಬೆರೆಯುತ್ತ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾನೆ. ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಗಳೊಂದಿಗೆ ಮುಕ್ತವಾಗಿ ಸೇರುತ್ತಿದ್ದಾನೆ. ಅವುಗಳೊಂದಿಗೆ ಊಟ-ತಿಂಡಿ, ಆಟ-ನಲಿದಾಟದಲ್ಲೂ ಭಾಗಿಯಾಗುತ್ತಿದ್ದಾನೆ.


ಲಕ್ಷ್ಮೀಯೊಂದಿಗೆ ಸಲಿಗೆ: ಅಂಬಾರಿ ಆನೆ, ಗಜಪಡೆಯ ನಾಯಕ ಅಭಿಮನ್ಯು(58) ನೊಂದಿಗೆ ಕೊಂಚ ಅಂತರ ಕಾಯ್ದುಕೊಂಡಿರುವ ಏಕಲವ್ಯ, 23 ವರ್ಷದ ಲಕ್ಷ್ಮೀ ಆನೆಯೊಂದಿಗೆ ಮಾತ್ರ ಸಲಿಗೆಯಿಂದ ಇದ್ದಾನೆ. 68 ವರ್ಷ ವರಲಕ್ಷ್ಮೀ ಹತ್ತಿರ ಹೋಗಲು ಹಿಂದೇಟು ಹಾಕುತ್ತಾನೆ. ಉಳಿದಂತೆ ಭೀಮ(24), ಗೋಪಿ(42), ಧನಂಜಯ(44), ಕಂಜನ್(25), ರೋಹಿತ(22)ನೊಂದಿಗೆ ಮುಕ್ತ ಒಡನಾಟ ಬೆಳೆಸಿಕೊಂಡಿದ್ದು, ಅವುಗಳೊಂದಿಗೆ ನಲಿಯುತ್ತಿದ್ದಾನೆ. ಆದಾಗ್ಯೂ ತನ್ನ ಸೌಮ್ಯ ಸ್ವಭಾವ ಎಲ್ಲಿಯೂ ಬಿಟ್ಟಕೊಡುತ್ತಿಲ್ಲ.

ಈ ರೀತಿ ವಿಭಿನ್ನ ಮನೋಭಾವದ ಮೂಲಕ ಏಕಲವ್ಯ ತ್ವರಿತವಾಗಿ ಗಜಪಡೆಯ ಕಣ್ಮಣಿಯಾಗಿ ಹೊರಹೊಮ್ಮಿದ್ದಾನೆ. ದಸರಾ ಮಹೋತ್ಸವದಲ್ಲಿ ಮಹತ್ತರ ಹೊಣೆಗಾರಿಕೆ ನಿರ್ವಹಣೆ ಮಾಡುವ ಭರವಸೆಯನ್ನೂ ಮೂಡಿಸಿದ್ದಾನೆ.

‘ಮೂಡಿಗೆರೆ ಭೈರ’ ಪೂರ್ವನಾಮ


ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವಲಯದ ಮತ್ತಿಗೋಡು ಸಾಕಾನೆ ಶಿಬಿರದಿಂದ ಬಂದಿರುವ ಏಕಲವ್ಯ ಆನೆ ಇದೀಗ ಎಲ್ಲರ ಆಕರ್ಷಣೆ. ಈತನ ಮೊದಲು ಹೆಸರು ‘ಮೂಡಿಗೆರೆ ಭೈರ’. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಆಲ್ದೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗ್ರಾಮಗಳಿಗೆ ಬಂದು ಉಪಟಳ ನೀಡುತ್ತಿದ್ದ. ಈ ಕಾರಣಕ್ಕೆ ಆನೆಗೆ ‘ಮೂಡಿಗೆರೆ ಭೈರ’ ಎಂದು ಸ್ಥಳೀಯರು ಹೆಸರಿಟ್ಟಿದ್ದರು. ಬಳಿಕ ಏಕಲವ್ಯನಾಗಿ ಬದಲಾವಣೆಗೊಂಡಿದ್ದು ರೋಚಕ ಕಥೆ.


2 ವರ್ಷ ಕಾಲ ಹಾವಳಿ:

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಆಲ್ದೂರು ಸುತ್ತಮುತ್ತಲ ಗ್ರಾಮಗಳಲ್ಲಿ 2020ರಿಂದ 2 ವರ್ಷ ಕಾಲ ಈ ಆನೆಯ ಹಾವಳಿ ಹೆಚ್ಚಿತ್ತು. ಮೇಲಿಂದ ಮೇಲೆ ಪ್ರತ್ಯಕ್ಷವಾಗುವ ಮೂಲಕ ಸ್ಥಳೀಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತ್ತು ಈ ಆನೆ. ‘ದಾಳಿ ನಡೆಸಿ ಮೂವರ ಸಾವಿಗೆ ಇದು ಕಾರಣವಾಗಿದೆ’ ಎಂಬ ಆರೋಪವೂ ಇದೆ. ಆದರೆ ಆ ಸಂದರ್ಭದಲ್ಲಿ ಅಲ್ಲಿ ಎರಡು ಕಾಡಾನೆಗಳು ಸಂಚರಿಸುತ್ತಿದ್ದವು. ಜತೆಗೆ ಸಾವಿಗೆ ಕಾರಣವಾದ ಆನೆ ಭೈರ ಎಂಬುದು ಸಹ ಖಚಿತವಾಗಿಲ್ಲ. ಸ್ಥಳೀಯರು ಮಾತ್ರ ಭೈರನತ್ತ ಬೊಟ್ಟು ಮಾಡುತ್ತಿದ್ದರು. ಜನರ ಪ್ರತಿಭಟನೆ ಹಿನ್ನೆಲೆಯಲ್ಲಿ ಸೆರೆ ಕಾರ್ಯಾಚರಣೆ ನಡೆಸಲಾಯಿತು.


ವರ್ಷದಲ್ಲೇ ಸ್ವೌಮ್ಯ ಸ್ವಭಾವಿ:

2022ರ ಫೆ.12ರಂದು ಮೂಡಿಗೆರೆ ಬಳಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಭೈರನಿಗೆ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಯಿತು. ತದನಂತರ ಮತ್ತಿಗೋಡು ಕ್ಯಾಂಪ್‌ಗೆ ಸ್ಥಳಾಂತರಿಸಲಾಯಿತು. ಕ್ರಾಲ್‌ನಲ್ಲಿಟ್ಟು ಪಳಗಿಸಿ ತಹಬದಿಗೆ ತರಲಾಯಿತು. ತರುವಾಯ ಒಂದು ವರ್ಷದಲ್ಲೇ ಸೌಮ್ಯ ಸ್ವಭಾವಿ ಆಗಿ ಭೈರ ಬದಲಾದ. ವ್ಯಕ್ತಿತ್ವವನ್ನೇ ಪರಿವರ್ತನೆ ಮಾಡಿಕೊಂಡಿದ್ದರಿಂದ ಮೂಡಿಗೆರೆ ಭೈರನಿಗೆ ಏಕಲವ್ಯ ಎಂಬ ಹೊಸ ಹೆಸರು ಇಡಲಾಯಿತು. ಮಾವುತ ಸೃಜನ್ ಹಾಗೂ ಎಸ್.ಇದಾಯತ್ ಅವರ ಆರೈಕೆಯಲ್ಲಿ ಇದು ಪಳಗಿದೆ. ಅವರ ಸೂಚನೆ ಚಾಚೂತಪ್ಪದೆ ಪಾಲನೆ ಮಾಡುವ ಮೂಲಕ ಸೈ ಎನಿಸಿಕೊಂಡಿದೆ.


ಅಧ್ಯಾಯ ಬರೆಯಲು ಉತ್ಸುಕ


4,150 ಕೆಜಿ ತೂಕ, 2.83 ಮೀಟರ್ ಎತ್ತರ, 3.70 ಮೀಟರ್ ಉದ್ದ ಈ ಆನೆ ಸಮತಟ್ಟಾದ ಮೈ ಹೊಂದಿದೆ. ನಡಿಗೆಯಲ್ಲಿ ರಾಜಗಾಂಭಿರ್ಯವನ್ನೂ ಮೈಗೂಡಿಸಿಕೊಂಡಿದೆ. 18 ತಿಂಗಳ ಹಿಂದೆ ಕಾಡಾನೆಯಾಗಿದ್ದ ಆನೆ ಇದೀಗ ಏಕಲವ್ಯ ಸಾಕಾನೆಯಾಗಿ ರೂಪಾಂತರಗೊಂಡಿದೆ. ಇದರ ಸ್ವಭಾವದಿಂದ ದಸರೆಗೆ ಆಯ್ಕೆಯಾಗಿದೆ. ಹಳೆಯದನ್ನು ಮರೆತು ಹೊಸ ಅಧ್ಯಾಯ ಬರೆಯಲು ಇದು ಉತ್ಸುಕವಾಗಿದೆ. ಮತ್ತಿಗೋಡು ಕ್ಯಾಂಪ್‌ನಲ್ಲಿರುವ ಎಲ್ಲ ಆನೆಗಳ ಮಾವುತ, ಕಾವಾಡಿಗಳ ಪ್ರೀತಿಗೂ ಪಾತ್ರವಾಗಿದೆ.

ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಬಂದಿರುವ ಏಕಲವ್ಯ ಹೊಸ ಭರವಸೆ ಮೂಡಿಸಿದೆ. ನಗರ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತಿದೆ. ಪ್ರಬುದ್ಧವಾಗಿ ವರ್ತನೆ ಮಾಡುತ್ತಿದೆ. ಇದು ಆಶಾದಾಯಕ ಬೆಳವಣಿಗೆ. ದಸರಾದ ಹೊಣೆಗಾರಿಕೆ ನಿರ್ವಹಣೆ ಮಾಡುವ ಆಶ್ವಾಸ ಮೂಡಿಸಿದೆ. ಐ.ಬಿ.ಪ್ರಭುಗೌಡ ಡಿಸಿಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net