

ಚಿಕ್ಕಮಗಳೂರು: ಸರ್ದಾರ್ ವಲ್ಲಭ ಬಾಯ್ ಪಟೇಲ್ ಜನ್ಮ ದಿನಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಜಿಲ್ಲಾ ಪೊಲೀಸ್ ಕಚೇರಿ ಎದುರು ಶನಿವಾರ ರಾಷ್ಟ್ರೀಯ ಏಕತಾ ದಿವಸ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಸ್.ಶ್ರುತಿ ಮಾತನಾಡಿ, ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಆಂತರಿಕ ಭದ್ರತೆ ಕಾಪಾಡಲು ನಮ್ಮನ್ನು ಅರ್ಪಿಸಿಕೊಳ್ಳುತ್ತೇವೆ ಎಂದು ಪ್ರಮಾಣ ವಚನ ಬೋಧಿಸಿದರು.
ಭಾರತದ ಸಮಗ್ರತೆಗೆ ಸರ್ದಾರ್ ವಲ್ಲಭಭಾಯ್ ಪಟೇಲ್ ತುಂಬಾ ಶ್ರಮ ವಹಿಸಿದವರು, ಈ ಕಾರಣಕ್ಕೆ ಅವರ ಜನ್ಮ ದಿನವನ್ನು ರಾಷ್ಟ್ರೀಯ ಏಕತಾ ದಿವಸವನ್ನಾಗಿ ಆಚರಿಸಬೇಕೆಂದು ಗೃಹ ಇಲಾಖೆ ನಿರ್ಧರಿಸಿದೆ. ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಸೇರಿದಂತೆ ಅಗತ್ಯ ಮುಂಜಾಗ್ರತೆ ವಹಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಪ್ರಯುಕ್ತ ಹನುಮಂತಪ್ಪ ವೃತ್ತದಿಂದ ಜಿಲ್ಲಾ ಪೊಲೀಸ್ ಕಚೇರಿವರೆಗೆ ಅಧಿಕಾರಿ-ಸಿಬ್ಬಂದಿಯಿಂದ ಜಾಥಾ ನಡೆಸಲಾಯಿತು. ಡಿವೈಎಸ್‍ಪಿಗಳಾದ ಪ್ರಭು, ವೃತ್ತ ನಿರೀಕ್ಷಕರಾದ ಸಲೀಂ ಅಬ್ಬಾಸ್, ವಿನೋದ್ ಭಟ್, ಸಿದ್ದರಾಮಯ್ಯ, ಸ್ವರ್ಣ, ಇತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಅಗ್ನಿಶಾಮಕದಳ, ಹೋಂಗಾಡ್ರ್ಸ್, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮುಖ್ಯಸ್ಥರು ಕಾರ್ಯಕ್ರಮದಲ್ಲಿದ್ದರು.