

ಹಗರಿಬೊಮ್ಮನಹಳ್ಳಿ: ವಾಲ್ಮೀಕಿ ಭವನದ ಮೇಲ್ಮಹಡಿ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ನಾಗೇಂದ್ರ ಭರವಸೆ ನೀಡಿದ್ದಾರೆ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ವಾಲ್ಮೀಕಿ ನಾಯಕ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತಿ, ಬಡ್ತಿ ಹೊಂದಿದ ನೌಕರರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಏಕಲವ್ಯ ವಸತಿ ಶಾಲೆ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಸತಿ ಶಾಲೆಗೆ ಅಗತ್ಯ ನಿವೇಶನ ಒದಗಿಸಲು ಸಚಿವ ನಾಗೇಂದ್ರ ಬಳಿ ಚರ್ಚಿಸಲಾಗಿದೆ. ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣ ಮಾಡುವುದು ಸಾಮಾನ್ಯ.
ಆದರೆ ಆಡಳಿತ ವಿಚಾರದಲ್ಲಿ ರಾಜಕಾರಣ ಸಲ್ಲದು. ಕೇವಲ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಲಾಗುವುದು ಎಂದ ಅವರು, ವಿದ್ಯಾರ್ಥಿಗಳು ನಿಗದಿತ ಗುರಿ ಸಾಧನೆಗೆ ಸಂಕಲ್ಪ ಮತ್ತು ಪರಿಶ್ರಮ ಅಗತ್ಯವಿದೆ ಎಂದರು.
ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಟಿ.ವೆಂಕೋಬಪ್ಪ, ನೌಕರರ ಸಂಘದ ಅಧ್ಯಕ್ಷ ಚಂದ್ರಾಮಪ್ಪ ಮಾತನಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ನಾಣ್ಯಾಪುರ ಕೃಷ್ಣಮೂರ್ತಿ, ಪ್ರಮುಖರಾದ ಮೃತ್ಯುಂಜಯ ಬಾದಾಮಿ, ಮುಗಲಿ ಅಂಬಣ್ಣ, ಮಗಿಮಾವಿನಹಳ್ಳಿ ಉಡುಚಪ್ಪ, ಜೆ.ಯೋಗಾನಂದ, ಕನ್ನಿಹಳ್ಳಿ ಚಂದ್ರಶೇಖರ್, ಸೆರೆಗಾರ್ ಹುಚ್ಚಪ್ಪ, ಬ್ಯಾಟಿ ನಾಗರಾಜ್, ಡಾ.ಎಂ.ಕೆ.ದುರುಗಪ್ಪ,, ಟಿ.ಸೋಮಶೇಖರ್, ಕೆ.ಮಲ್ಲಿಕಾರ್ಜುನ, ಯು.ರಾಮಕೃಷ್ಣ, ತಂಬ್ರಹಳ್ಳಿ ನಾಗರಾಜ್, ದಯಾನಂದ ಇತರರಿದ್ದರು. ಶಿಕ್ಷಕರಾದ ಅಣಜಿ ಮೋಹನ್, ಮಾಳಿಗಿ ಕವಿತಾ, ಸುರೇಶ್, ಬ್ಯಾಟಿ ಮಾರುತಿ, ಬಿ.ಪ್ರಕಾಶ್ ನಿರ್ವಹಿಸಿದರು.