

ಮಂಡ್ಯ: ದೇಶದ ಕಲೆ, ಸಂಸ್ಕೃತಿ, ದೇಶೀಯತೆ ಹಾಗೂ ಸ್ವದೇಶಿ ವಸ್ತುಗಳನ್ನು ಬಳಕೆಯ ಮೂಲಕ ಸಮೃದ್ಧತೆಯನ್ನು ಪ್ರತಿಬಿಂಬಿಸಲು ಕಲಾ ಉತ್ಸವದಂತಹ ಕಾರ್ಯಕ್ರಮ ಪೂರಕವಾದವು ಎಂದು ಜವಾಹರ್ ನವೋದಯ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಕೆ.ಪಾರ್ಥಿವನ್ ತಿಳಿಸಿದರು.
ತಾಲೂಕಿನ ಬಿ.ಹೊಸೂರು ಕಾಲನಿಯಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಮತ್ತು ಕಲಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದ ಯಾವುದೇ ದೇಶಕ್ಕೆ ಹೋಲಿಕೆ ಮಾಡಿದರೂ ಭಾರತ ಅತಿ ಹೆಚ್ಚು ವಿಭಿನ್ನ ಸಂಸ್ಕೃತಿ ಒಳಗೊಂಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ರಾಜ್ಯಗಳು ತಮ್ಮದೇ ಆದ ವೈವಿದ್ಯತೆಯನ್ನು ಹೊಂದಿದೆ ಎಂದು ಹೇಳಿದರು.
ಇದೀಗ ಅಮೆರಿಕಾ ಭಾರತದ ಉತ್ಪನ್ನಗಳ ಮೇಲೆ ಶೇ.50 ರಷ್ಟು ಸುಂಕವನ್ನು ಹೇರಿದೆ. ಈ ಮೂಲಕ ದೇಶದ ಆರ್ಥಿಕತೆಯ ಮೇಲೆ ತನ್ನ ಪ್ರಭಾವ ಬೀರಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದೇಶ ಉತ್ಪನ್ನಗಳ ಅವಲಂಬನೆ ತಪ್ಪಿಲು ಸ್ವದೇಶಿ ಉತ್ಪನ್ನಗಳನ್ನು ಹೆಚ್ಚು ಬಳಸುವಂತೆ ಕರೆ ನೀಡಿದ್ದಾರೆ. ಅವರ ಕರೆಯಂತೆ ನಾವೆಲ್ಲರೂ ಸ್ವದೇಶಿ ಉತ್ಪನ್ನ ಬಳಸಿ, ದೇಶದ ಆರ್ಥಿಕತೆಗೆ ಸಹಕರಿಸಲು ಮುಂದಾಗಬೇಕು. ಅಂತೆಯೇ ನಮ್ಮ ಸಂಸ್ಕೃತಿಯು ಹೆಚ್ಚು ಶ್ರೀಮಂತವಾಗಿದೆ. ಅವುಗಳನ್ನು ಉಳಿಸಿ, ಬೆಳೆಸುವತ್ತಾ ದಾಪುಗಾಲಿಡಬೇಕು ಎಂದರು.
ಕೇಂದ್ರೀಯ ವಿದ್ಯಾಲಯ ಪ್ರಾಂಶುಪಾಲ ಭರತ್‌ಲಾಲ್ ಮಾತನಾಡಿ, ಶಾಲೆಯ ಮಕ್ಕಳಲ್ಲಿ ಕಲೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಏಕ್ ಭಾರತ್ ಶ್ರೇಷ್ಠ ಭಾರತ್’ ಮತ್ತು ಕಲಾ ಉತ್ಸವ ಸಹಕಾರಿ. ದೇಸಿಯ ವಿಭಿನ್ನ ಕಲೆಗಳ ಬಗ್ಗೆ ಮಕ್ಕಳಲ್ಲಿ ಹೆಚ್ಚು ತಿಳಿವಳಿಕೆ ಹೆಚ್ಚಿಸಲು ಕಾರ್ಯಕ್ರಮ ನೆರವಾಗಲಿದೆ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯವಾಗಿದೆ. ಕ್ರೀಡೆ- ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಕಾಣಸಲು ಸಾಧ್ಯ. ಅವರಲ್ಲಿನ ಅಪ್ರತಿಮ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಪ್ರಕಾಶನ್, ಪೂನಂ ಕುಮಾರಿ ಇದ್ದರು. ಮಂಗಳೂರಿನ ಎರಡು, ಮೈಸೂರಿನ ಎರಡು, ಶಿವಮೊಗ್ಗ, ಚನ್ನಪಟ್ಟಣ, ಚಾಮರಾಜನಗರದ ತಲಾ ಒಂದೊಂದು ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು. ಗಾಯನ, ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಎಂ.ಸಿ.ಐಶ್ವರ್ಯಾ, ಎಸ್.ವಿ.ಅಶ್ವಿನಿ, ಬಿ.ಆರ್.ಅಶ್ವಿನಿ, ವಾದ್ಯ ಸ್ಪರ್ಧೆಯ ತೀರ್ಪುಗಾರರಾಗಿ ಮಹದೇವ್, ಸಿ.ಎಸ್.ವೇದಶ್ರೀ, ಗಣೇಶ್‌ಭಟ್, ಕಲೆ ವಿಭಾಗದ ತೀರ್ಪುಗಾರರಾಗಿ ಅರವಿಂದ್‌ಪ್ರಭು, ಧನಂಜಯ, ಸೋನಿಕಾ ಕಾರ್ಯನಿರ್ವಹಿಸಿದರು.