

ತಿ.ನರಸೀಪುರ: ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿರುವ ಹಲವು ದಶಕಗಳಷ್ಟು ಹಳೆಯದಾದ ಪುರಸಭೆಯ ವಾಣಿಜ್ಯ ಮಳಿಗೆಗಳ ಕಟ್ಟಡವನ್ನು ಮಂಗಳವಾರ ತೆರವು ನೆಲಸಮಗೊಳಿಸಲಾಯಿತು.
ಪುರಸಭೆ ಅಧಿಕಾರಿಗಳು ಇಟಾಚಿ ಬಳಸಿಕೊಳ್ಳುವುದರ ಜತೆಗೆ ಪೌರಸೇವಾ ನೌಕರರ ಸಹಾಯದೊಂದಿಗೆ ಕಟ್ಟಡವನ್ನು ತೆರವುಗೊಳಿಸಲಾಯಿತು. ಸತತ ನಾಲ್ಕೈದು ತಾಸು ಘರ್ಜಿಸಿದ ಜೆಸಿಬಿ, ಶಿಥಿಲಗೊಂಡಿದ್ದ ಎಂಟು ಮಳಿಗೆಗಳನ್ನು ನೆಲಕ್ಕುರುಳಿಸಿತು. ನೆಲಕ್ಕೆ ಬಿದ್ದು ಕಟ್ಟಡದ ಅವಶೇಷಗಳನ್ನು ಪೌರಕಾರ್ಮಿಕರು ಬೇರ್ಪಡಿಸಿ ಟ್ರಾೃಕ್ಟರ್‌ಗಳಿಗೆ ತುಂಬಿ ಸ್ಥಳಾಂತರಿಸಿದರು.
ಹಳೇ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ತೆರವುಗೊಳಿಸಬೇಕು. ಕಟ್ಟಡದ ಹಿಂಭಾಗ ಪ್ರದೇಶವನ್ನು ರಸ್ತೆ ಬದಿಯ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳವಾಗಿ ಕಲ್ಪಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ ಅವರು ಹಳೇ ವಾಣಿಜ್ಯ ಮಳಿಗೆಗಳ ಕಟ್ಟಡವನ್ನು ತೆರವುಗೊಳಿಸುವ ಅನುಮತಿ ಪಡೆದಿರುವ ಬಗ್ಗೆಯೂ ಪ್ರತಿಭಟನಾಕಾರರಿಗೆ ತಿಳಿಸಿ, ವಾರದ ಗಡುವನ್ನು ಪಡೆದಿದ್ದರು.
ಅದರಂತೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಮುಖ್ಯಾಧಿಕಾರಿಯವರೇ ಮಾರುಕಟ್ಟೆಯ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಿ, ಕಟ್ಟಡವನ್ನು ನೆಲಸಮಗೊಳಿಸಿದರು. ಪೊಲೀಸ್ ಇನ್‌ಸ್ಪ್ಪೆಕ್ಟರ್ ಧನಂಜಯ ಖುದ್ದಾಗಿ ನಿಂತು ಬಿಗಿ ಭದ್ರತೆ ಒದಗಿಸಿದ್ದರು.