ಸ್ವರ್ಣವಲ್ಲೀ ಮಠದಲ್ಲಿ ಎಂಟು ಲಕ್ಷ ತುಳಸಿ ಅರ್ಚನೆ

27sirsi3 TULASI
Published on

ಶಿರಸಿ: ದೇಶ ಕಾಯುವ ಸೈನಿಕರ ರಕ್ಷಣೆ, ಸೈನಿಕರ ಬಲ ವೃದ್ಧಿ, ಆತ್ಮಸ್ಥೈರ್ಯ ವೃದ್ಧಿ ಆರೋಗ್ಯ ಭಾಗ್ಯ ಕರುಣಿಸಲು ಹಾಗೂ ಲೋಕದಲ್ಲಿ ಧರ್ಮ ನೆಲೆಸಲಿ, ದೇಶ ರಾಮ ರಾಜ್ಯವಾಗಲಿ, ಲೋಕ ಕಲ್ಯಾಣವಾಗಲಿ ಎಂದು ಸಂಕಲ್ಪಿಸಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಎಂಟು ಲಕ್ಷ ತುಳಸಿ ಅರ್ಚನೆ ಸೋಮವಾರ ನಡೆಯಿತು.

ಸ್ವರ್ಣವಲ್ಲೀ ಮಠದ ಹಿರಿಯ ಯತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಂಕಲ್ಪದಂತೆ ಕಳೆದ 24 ವರ್ಷದಿಂದ ನಿರಂತರ ನಡೆಯುತ್ತಿದ್ದು, ಈ ವರ್ಷ ಬೆಳ್ಳಿ ವರ್ಷವಾಗಿದೆ. ಈ ಬಾರಿ ಕೂಡ 8 ಲಕ್ಷ ತುಳಸಿ ಅರ್ಚನೆ ಶ್ರೀಗಳ ಮಾರ್ಗದರ್ಶನದಲ್ಲಿ ಸಂಪನ್ನಗೊಂಡಿತು.

ತುಳಸಿ ಅರ್ಚನೆಯು ಎರಡು ನೂರು ವೈದಿಕರನ್ನು ಒಳಗೊಂಡು ಶಾಸ್ತ್ರೋಕ್ತವಾಗಿ ನೆರವೇರಿತು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶರಕ್ಷಣೆಗಾಗಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಕೋಟಿ ತುಳಸಿ ಅರ್ಚನೆ ಸಂಕಲ್ಪಿಸಿ ನೆರವೇರಿಸಿದ್ದರು. ಅವತ್ತಿನಿಂದ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರತಿವರ್ಷವೂ ಎಂಟು ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಆನೂಚಾನವಾಗಿ ನಡೆದುಬಂದಿದೆ.

ಭಗವಾನ್ ಶ್ರೀಕೃಷ್ಣನಿಗೆ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು, ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಕಲ್ಪೋಕ್ತ ಮಹಾಪೂಜೆ, ಮಹಾಮಂಗಳಾರತಿ ನೆರವೇರಿತು. ಈ ತುಳಸಿ ಅರ್ಚನೆಯನ್ನು ಶ್ರೀಮಠದ ಅಧ್ಯಾಪಕ ವೃಂದದವರು, ಉಮ್ಮಚಿಗಿ, ಸ್ವರ್ಣವಲ್ಲೀ, ನಡಗೋಡು ಪಾಠಶಾಲೆಗಳ ವಿದ್ಯಾರ್ಥಿಗಳು ನೆರವೇರಿಸಿದರು. ಭಗವಾನ್ ಶ್ರೀಕೃಷ್ಣನಿಗೆ ಅರ್ಚನೆಗೆ ತುಳಸಿಯು ಶ್ರೀಮಠದ ಸಮಸ್ತ ಭಕ್ತರಿಂದ ಸಾಗರೋಪಾದಿಯಲ್ಲಿ ಒದಗಿಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net