ಎಂಟು ಅಂತಾರಾಜ್ಯ ಕಳ್ಳರ ಬಂಧನ

4Athani1
Published on

ಅಥಣಿ/ಅಥಣಿ ಗ್ರಾಮೀಣ: ಗಡಿಭಾಗದಲ್ಲಿ ಕಳ್ಳತನಲ್ಲಿ ಸಕ್ರಿಯವಾಗಿದ್ದ ಎಂಟು ಜನ ಅಂತಾರಾಜ್ಯ ಕಳ್ಳರನ್ನು ಅಥಣಿ ಹಾಗೂ ಐಗಳಿ ಪೊಲೀಸರು ಬಂಧಿಸಿದ್ದಾರೆ.

ಒಂದು ಪ್ರಕರಣದಲ್ಲಿ ಪಟ್ಟಣದಲ್ಲಿ ಆ.26ರಂದು ಆಭರಣ ಅಂಗಡಿಯೊಂದರಲ್ಲಿ ದರೋಡೆಗೆ ಯತ್ನಿಸಿದ್ದ ಮಹಾರಾಷ್ಟ್ರ ಮೂಲದ ವಿಜಯ ಸಂಜಯ ಜಾವೀರ, ಯಶವಂತ ಗುರವ, ಹನಮಂತ ವಾಂಡ್ರೆ, ಸೂರಜ್​ ಬೂದಾವಲೆ ಮತ್ತು ಭರತ ಕಾಟ್ಕರ್​ ಅವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ 2 ಪಿಸ್ತೂಲ್​, 7 ಗುಂಡು, ಕಾರು, ಬೈಕ್​ ವಶಕ್ಕೆ ಪಡೆದಿದ್ದಾರೆ. ಅಂಗಡಿ ಮಾಲೀಕನಿಗೆ ಪಿಸ್ತೂಲ್​ ತೋರಿಸಿ ಆಭರಣ ದೋಚಲು ಯತ್ನಿಸಿರುವ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕುರಿತು ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ ವಿವಿಧ ಗ್ರಾಮ ಮತ್ತು ಪಟ್ಟಣದಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಿರಜ ತಾಲೂಕಿನ ಲಿಂಗನೂರ ಗ್ರಾಮದ ಪ್ರದಿಪ ನಾಯಕ (19), ಅಂಕುಶ ಲೋಹಾರ (20), ರಾಜೇಂದ್ರ ನಾಯಕ (21) ಅವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ 1.80 ಲಕ್ಷ ರೂ. ಮೊತ್ತದ 2 ಬೈಕ್​, 6 ಲಕ್ಷ ರೂ. ಮೊತ್ತದ 60 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡು, ಮೂವರೂ ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳು ಆ. 20ರಂದು ತಾಲೂಕಿನ ಹಾಲಳ್ಳಿ ಗ್ರಾಮದ ಗೌರವ್ವ ಕಲಶೆಟ್ಟಿ ಅವರ 25 ಗ್ರಾಂ, ಸುಟ್ಟಟ್ಟಿ ಬೋರವ್ವ ನಾವಿಯವರ 10 ಗ್ರಾಂ, ಚಮಕೇರಿ ಗ್ರಾಮದ ಅಕ್ಕಾತಾಯಿ ಹೊನವಾಡ ಅವರ 20 ಗ್ರಾಂ ಚಿನ್ನಾಭರಣ ದೋಚಿದ್ದರು. ಐಗಳಿಯಲ್ಲಿ 4 ಪ್ರಕರಣ, ಅಥಣಿಯಲ್ಲಿ 2, ರಾಯಬಾಗದಲ್ಲಿ 1, ಕುಡಚಿ ಠಾಣೆಯಲ್ಲಿ 1 ಪ್ರಕರಣ ಹಾಗೂ ಮಹಾರಾಷ್ಟ್ರದ ಮಿರಜ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ 1 ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳಲ್ಲಿ ಸುಲಿಗೆ ಮಾಡಿದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಹಾಗೂ ಐಗಳಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪಿಎಸ್​ಐಗಳಾದ ಜಿ.ಎಸ್​.ಉಪ್ಪಾರ, ಮಲ್ಲಿಕಾರ್ಜುನ ತಳವಾರ, ಕುಮಾರ ಹಾಡಕಾರ ಇವರ ತಂಡದಲ್ಲಿ ಅಥಣಿ ಪೊಲೀಸ್​ ಠಾಣೆ ಸಿಬ್ಬಂದಿ ಪಿ.ಬಿ.ನಾಯಕ, ಎ.ಎ.ಇರಕರ, ಬಿ.ಬಿ.ಪಾಟೀಲ, ಜೆ.ಎಚ್​.ಡಾಂಗೆ, ಎ.ಎ.ಮೈಗೂರ, ಡಿ.ಐ.ಧರಿಗೌಡರ, ಜಿ.ಎಸ್​.ಗುರುಮಠ, ಡಿ.ಟಿ.ಶಾನವಾಡ, ಎಸ್​.ಸಿ.ಪೂಜಾರಿ, ವಿನೋದ ಠಕ್ಕಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net