ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎಂಟು ಆರೋಪಿಗಳ ಬಂಧನ - ಪ್ರತೀಕಾರ ಹಾಗೂ ಪೂರ್ವದ್ವೇಷವೇ ಕೊಲೆಗೆ ಕಾರಣ

mng--3 May suhas shetty Accused
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದ್ದ ರೌಡಿಶೀಟರ್ , ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದ 8 ಆರೋಪಿಗಳನ್ನು ಪೊಲೀಸರು 24 ಗಂಟೆಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನು ಗುರುತಿಸಲಾಗಿದ್ದು, ಶೀಘ್ರ ಬಂಧನವಾಗಲಿದೆ.

ಬಜಪೆ ಶಾಂತಿಗುಡ್ಡೆಯ ಅಬ್ದುಲ್ ಸಫ್ವಾನ್ (29) ಪ್ರಮುಖ ಆರೋಪಿ. ಬಜಪೆ ಶಾಂತಿಗುಡ್ಡೆಯ ನಿಯಾಜ್ (25), ಬಜಪೆ ಶಾಂತಿಗುಡ್ಡೆಯ ಮೊಹಮ್ಮದ್ ಮುಸಮ್ಮೀರ್ (32), ಕಳವಾರು ಕುರ್ಸುಗುಡ್ಡೆಯ ಕಲಂದರ್ ಶಾಫಿ (29), ಬಾಳ ಮಂಗಳಪೇಟೆಯ ಆದಿಲ್ ಮೆಹರೂಫ್ (27), ಕಳಸ ಮಾವಿನಕೆರೆ ಗ್ರಾಮದ ಕೋಟೆಹೊಳೆಯ ನಾಗರಾಜ್ ಎಂ (20), ಜೋಕಟ್ಟೆಯ ಮೊಹಮ್ಮದ್ ರಿಜ್ವಾನ್ (28), ಕಳಸ ರುದ್ರಪಾದೆಯ ರಂಜಿತ್ (19) ಬಂಧಿತರು. ಇನ್ನಿಬ್ಬರು ಆರೋಪಿಗಳನ್ನು ಗುರುತಿಸಲಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್ ಕಾರು, ಬೊಲೆರೋ ಪಿಕ್‌ಅಪ್, ಘಟನಾ ಸ್ಥಳದಲ್ಲಿದ್ದ ಆಯುಧಗಳನ್ನು ವಶಪಡಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಬಜಪೆ ಬಳಿಯ ಕಿನ್ನಿಪದವುನಲ್ಲಿ ಮೇ 1ರಂದು ರೌಡಿಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (32) ಎಂಬಾತನು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರನ್ನು ಗೂಡ್ಸ್ ಡೆಂಪೋ ಡಿಕ್ಕಿ ಹೊಡೆಯಿಸಿ ಹಿಂಬಾಲಿಸಿಕೊಂಡು ಬಂದ ತಂಡ ತಲವಾರುಗಳಿಂದ ಯದ್ವಾತದ್ವಾ ಕಡಿದು ಕೊಲೆ ಮಾಡಿ ಪರಾರಿಯಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹಾಸ್ ಶೆಟ್ಟಿ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹಿಂದೂ ಯುವಕರು ಮೃತದೇಹವಿಟ್ಟಿದ್ದ ಆಸ್ಪತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇ 2 ರಂದು ಬಂದ್ ಯಶಸ್ವಿಯಾಗಿತ್ತು.

ಪ್ರತೀಕಾರ-ಪೂರ್ವದ್ವೇಷ ಕಾರಣ

ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಸಫ್ವಾನ್ ಎಂಬಾತನ ಮೇಲೆ 2023ರಲ್ಲಿ ಈ ಪ್ರಕರಣದಲ್ಲಿ ಕೊಲೆಯಾಗಿರುವ ಸುಹಾಸ್ ಶೆಟ್ಟಿ ಅವರ ಸಹಚರರಾದ ಪ್ರಶಾಂತ್, ಗಣೇಶ್, ಯಜ್ಞೇಶ್, ಧನರಾಜು, ಪುನೀತ್ ಮತ್ತು ಇತರರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವಿಚಾರದಲ್ಲಿ ಅಬ್ದುಲ್ ಸಫ್ವಾನ್‌ನನ್ನು ಸುಹಾಸ್ ಶೆಟ್ಟಿ ಮತ್ತು ಅವನ ಸಹಚರರು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಜೀವ ಭಯ ಹಾಗೂ ದ್ವೇಷದಿಂದ ಅಬ್ದುಲ್ ಸಫ್ವಾನ್ ಇತರ ಆರೋಪಿಗಳ ಜತೆ ಸೇರಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿದ್ದಾರೆ.

5 ಲಕ್ಷ ರೂ. ಸುಫಾರಿ: ಸುರತ್ಕಲ್‌ನಲ್ಲಿ 2023ರಲ್ಲಿ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಕೊಲೆಯಾಗಿದ್ದ ಪಾಝಿಲ್ ಸಹೋದರ ಆದಿಲ್ ಮೆಹರೂಫ್‌ಗೆ ತನ್ನ ತಮ್ಮನ ಕೊಲೆಗೈದ ದ್ವೇಷ ಸುಹಾಸ್ ಶೆಟ್ಟಿ ಮೇಲಿತ್ತು. ಅಬ್ದುಲ್ ಸಫ್ವಾನ್ ಆದಿಲ್ ಮೆಹರೂಫ್‌ನನ್ನು ಸಂಪರ್ಕಿಸಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ಉದ್ದೇಶಿಸಿರುವ ವಿಚಾರ ತಿಳಿಸಿದ್ದ. ಆಗ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿದರೆ 5 ಲಕ್ಷ ರೂ. ಸುಫಾರಿ ನೀಡುವುದಾಗಿ ಆದಿಲ್ ಮೆಹರೂಪ್ ಹೇಳಿ ಅವರೊಂದಿಗೆ ಕೈ ಜೋಡಿಸಿದ್ದ. ಅದರಂತೆ 3 ಲಕ್ಷ ರೂ. ಮುಂಗಡ ನೀಡಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.

ಆರೋಪಿಗಳ ವಿರುದ್ಧ ಇರುವ ಹಳೇ ಪ್ರಕರಣ

ಅಬ್ದುಲ್ ಸಫ್ವಾನ್ ವಿರುದ್ಧ ಬಜಪೆ ಹಾಗೂ ಸಕಲೇಶಪುರ ಪೊಲೀಸ್ ಠಾಣೆ, ನಿಯಾಜ್ ವಿರುದ್ಧ ಬಜಪೆ ಪೊಲೀಸ್ ಠಾಣೆ, ಮೊಹಮ್ಮದ್ ಮುಸಮ್ಮೀರ್ ವಿರುದ್ಧ ಪಣಂಬೂರು ಪೊಲೀಸ್ ಠಾಣೆ, ಕಲಂದರ್ ಶಾಫಿ ವಿರುದ್ಧ ಸುರತ್ಕಲ್, ಬರ್ಕೆ, ಪಣಂಬೂರು ಪೊಲೀಸ್ ಠಾಣೆ, ಆದಿಲ್ ಮೆಹರೂಫ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣ ದಾಖಲಾಗಿವೆ.

ಏನೇನು ಕೆಲಸ ಮಾಡುತ್ತಿದ್ದರು?

ಅಬ್ದುಲ್ ಸಫ್ವಾನ್ ಚಾಲಕ, ನಿಯಾಜ್ ಮೇಸ್ತ್ರಿ ಕೆಲಸ, ಮೊಹಮ್ಮದ್ ಮುಝಮಿಲ್ 4 ತಿಂಗಳು ಸೌದಿ ಆರೇಬಿಯಾದಲ್ಲಿ ಸೇಲ್ಸ್‌ಮ್ಯಾನ್ ಆಗಿದ್ದ. 4 ತಿಂಗಳ ಹಿಂದೆ ಊರಿಗೆ ಬಂದು ಮದುವೆಯಾಗಿದ್ದ. ಕಲಂದರ್ ಶಾಫಿ ಬೆಂಗಳೂರಿನಲ್ಲಿ ಸೇಲ್ಸ್‌ಮ್ಯಾನ್ ಆಗಿದ್ದ. ರಂಜಿತ್ ಚಾಲಕ, ನಾಗರಾಜ್ ಶಾಮಿಯಾನ ಅಂಗಡಿಯಲ್ಲಿ ಕೆಲಸ, ಮೊಹಮ್ಮದ್ ರಿಜ್ವಾನ್ ಸೌದಿ ಅರೇಬಿಯಾದಲ್ಲಿ ಆಯಿಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು.

ಕಳಸದಿಂದ ಬಂದವರು: ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಬಂದಿದ್ದ ಆರೋಪಿಗಳಾದ ನಾಗರಾಜ್ ಹಾಗೂ ರಂಜಿತ್ ಸಫ್ವಾನ್ ಮನೆಯಲ್ಲಿ ಕಳೆದ 10 ದಿನಗಳಿಂದ ವಾಸ ಮಾಡಿಕೊಂಡಿದ್ದರು. ಇವರು ನಿಯಾಜ್‌ಗೆ ಪರಿಚಿತರಾಗಿದ್ದರು. ತಿಂಗಳ ಹಿಂದೆಯೇ ಸುಹಾಸ್ ಕೊಲೆಗೆ ಸಂಚು ರೂಪಿಸಲಾಗಿತ್ತು. ಹಿಂದೆ ಎರಡು ಬಾರಿ ಕೊಲೆಗೆ ಯತ್ನ ಮಾಡಲಾಗಿತ್ತು. ಆದರೆ ಕೂದಳೆಲೆ ಅಂತರದಲ್ಲಿ ತಪ್ಪಿಸಿಕೊಂಡಿದ್ದ. ಈ ಬಾರಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ.

ಇಬ್ಬರು ಮಹಿಳೆಯರ ಗುರುತು ಪತ್ತೆ: ಕೊಲೆ ಘಟನೆ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಆರೋಪಿಗಳು ಪರಾರಿಯಾಗಲು ಸಹಕಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅದರಲ್ಲಿ ಓರ್ವ ಮಹಿಳೆ ನಿಯಾಜ್‌ನ ಸಂಬಂಧಿಕರು. ಈ ವಿಚಾರವನ್ನು ಗುರುತಿಸಿದ್ದು, ಮಹಿಳೆಯರ ಗುರುತು ಪತ್ತೆಯಾಗಿದೆ. ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಆಯುಕ್ತರು ವಿವರಿಸಿದರು.

ವಾಹನ ಬಾಡಿಗೆಗೆ ಪಡೆಯಲಾಗಿತ್ತು: ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ಟೆಂಪೋ, ಸ್ವಿಫ್ಟ್ ಕಾರುಗಳನ್ನು ಬಾಡಿಗೆಗೆ ಪಡೆದಿದ್ದರು.

ಪರಾರಿಗೆ ಸಂಚು: ಕೊಲೆ ಕೃತ್ಯ ನಡೆಸಿದ ಬಳಿಕ ಆರೋಪಿಗಳು ಜಿಲ್ಲೆಯನ್ನು ಬಿಟ್ಟು ಪರಾರಿಯಾಗಲು ಸಂಚು ರೂಪಿಸಿದ್ದರು. ಆದರೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಯಾವ ಸಂಘಟನೆಗೆ ಸೇರಿದ್ದರು ಎಂಬುದರ ಬಗ್ಗೆ ಮಾಹಿತಿ ಲಭಿಸಿಲ್ಲ. ಅವರ ಸೋಷಿಯಲ್ ಮೀಡಿಯಾ ಖಾತೆಗಳನ್ನು ತನಿಖೆ ನಡೆಸಲಾಗುತ್ತಿದೆ. ಇದರಿಂದ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರೇ ಎನ್ನುವ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಆಯುಕ್ತರು ಹೇಳಿದರು.

5 ಪೊಲೀಸ್ ತಂಡದಿಂದ ಕಾರ್ಯಾಚರಣೆ

ಆರೋಪಿಗಳ ಪತ್ತೆಗೆ ಮಂಗಳೂರು ನಗರದ ಪೊಲೀಸ್ ಆಯುಕ್ತರು 5 ತಂಡಗಳನ್ನು ನೇಮಕಗೊಳಿಸಿ ಮಾರ್ಗದರ್ಶನ ನೀಡಿದ್ದರು. ಸಿಸಿಬಿ ಎಸಿಪಿ ತಂಡ, ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ತಂಡ, ಬಜಪೆ ಪೊಲೀಸರ ವಿಶೇಷ ತಂಡ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ವಿಶೇಷ ತಂಡ ಜಂಟಿ ಕಾರ್ಯಾಚರಣೆ ನಡೆಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net