ಗುಮ್ಮಟನಗರಿಯಲ್ಲಿ ಸಂಭ್ರಮದ ಈದ್ ಮಿಲಾದ್

DSC_6070
ವಿಜಯಪುರ ನಗರದಲ್ಲಿ ಈದ್ ಮಿಲಾದ್ ಪ್ರಯುಕ್ತ ಭಾನುವಾರ ನಡೆದ ಭವ್ಯ ಶೋಭಾಯಾತ್ರೆ ಚಿತ್ರಣ.
Published on

ವಿಜಯಪುರ : ಪ್ರವಾದಿ ಹಜರತ್ ಮಹಮದ್ ಪೈಗಂಬರ್ ಅವರ ಜಯಂತ್ಯುತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ-ಸಡಗರ ಹಾಗೂ ಭಕ್ತಿ ಭಾವದಿಂದ ಭಾನುವಾರ ಜಿಲ್ಲೆಯ ವಿವಿಧೆಡೆ ಆಚರಿಸಲಾಯಿತು.

ಪೈಗಂಬರ್ ಅವರು ಸಾರಿದ ಶಾಂತಿ, ಏಕತೆ, ಸಮಾನತೆಯ ತತ್ವಗಳ ಬಗ್ಗೆ ಜಾಗೃತಿ ಮೂಡಿಸಲು ಭವ್ಯ ಶೋಭಾಯಾತ್ರೆ ವಿಜಯಪುರ ನಗರದಲ್ಲಿ ನಡೆಯಿತು. ಸಹಸ್ರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಮೆರವಣಿಗೆ ವೈಭವದಿಂದ ಜರುಗಿತು. ಹಲವಾರು ಮಠಾಧೀಶರು, ವಿವಿಧ ಧರ್ಮಗಳ ಮುಖಂಡರು ಈ ರ‌್ಯಾಲಿಯಲ್ಲಿ ಭಾಗವಹಿಸಿ ಭಾವೈಕ್ಯತೆಯ ಸಂದೇಶ ಸಾರಿದರು.

ಸಾವಿರಾರು ಸಂಖ್ಯೆಯ ಯುವಕರು ‘ನಾರಾಯೇ ತಕ್ಬೀರ್ ಅಲ್ಲಾಹು ಅಕ್ಬರ್….ನಾರಾಯೇ ರಿಸಾಲತ್ ಯಾ ರಸೂಲ್ ಅಲ್ಲಾಹ….’ ಎಂಬ ಘೋಷಣೆಗಳನ್ನು ಭಕ್ತಿಭಾವದಿಂದ ಕೂಗುತ್ತಾ ಸಂಭ್ರಮದಿಂದ ಹೆಜ್ಜೆ ಹಾಕಿದರು.

ವಿಜಯಪುರದ ಹಜರತ್ ಹಾಸಿಂಪೀರ ದರ್ಗಾದಿಂದ ಆರಂಭಗೊಂಡ ಈ ಭವ್ಯ ಶೋಭಾಯಾತ್ರೆ ಗೋಳಗುಮ್ಮಟ ಕ್ರಾಸ್, ಹಕೀಂ ಚೌಕ್ತ್, ಜಾಮೀಯಾ ಮಸೀದಿ, ಬಡಿಕಮಾನ್, ಗಾಂಧಿಚೌಕ್, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಮಾರ್ಗವಾಗಿ ಸಂಚರಿಸಿ ದರಬಾರ ಹೈಸ್ಕೂಲ್ ಮೈದಾನಕ್ಕೆ ತಲುಪಿ ಸಂಪನ್ನಗೊಂಡಿತು.

ರ‌್ಯಾಲಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದ ಕರ್ನಾಟಕ ಅಹಲೆ ಸುನ್ನತ್ ಜಮಾತ್ ಅಧ್ಯಕ್ಷ ಹಜರತ್ ಸೈಯ್ಯದ್ ತನ್ವೀರಪೀರಾ ಹಾಶ್ಮೀ, ಹಜರತ್ ಪ್ರವಾದಿ ಪೈಗಂಬರರು ಮಾನವೀಯತೆ ಹಾಗೂ ಶಾಂತಿಯ ಇನ್ನೊಂದು ಹೆಸರು. ದೇಶದ ಕಾನೂನನ್ನು ಗೌರವಿಸುವಂತೆ ಪೈಗಂಬರ್ ಅವರು ಕರೆ ನೀಡಿದ್ದಾರೆ, ಅವರ ಸಂದೇಶಗಳು ಸಾರ್ವಕಾಲಿಕವಾಗಿದ್ದು, ಅದನ್ನು ಪಾಲಿಸಿ ಮುನ್ನಡೆದರೆ ಶಾಂತಿ ನೆಲೆಸುತ್ತದೆ ಎಂದರು. ಮೆರವಣಿಗೆ ಸಮಿತಿ ಅಧ್ಯಕ್ಷ ಶಕೀಲ್ ಸುತಾರ ಸೇರಿದಂತೆ ಹಲವಾರು ಮುಖಂಡರು, ಸಂಘ-ಸಂಸ್ಥೆಗಳ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸಂಭ್ರಮದ ಆಸಾರ್ ಉರುಸು
ವಿಜಯಪುರ ನಗರದಲ್ಲಿ ಸಂಭ್ರಮದ ಆಸಾರ್ ಉರುಸು ನಡೆಯಿತು. ಝಗಮಗಿಸುವ ದೀಪಗಳಿಂದ ಆಸಾರ್ ಮಹಲ್‌ನ್ನು ಅಲಂಕರಿಸಲಾಗಿತ್ತು. ಹಜರತ್ ಪ್ರವಾದಿ ಮಹಮದ್ ಪೈಗಂಬರ್ ಅವರ ಪವಿತ್ರ ಕೇಶವನ್ನು ಆಸಾರ್‌ನಲ್ಲಿ ಇರಿಸಲಾಗಿದ್ದು, ಶನಿವಾರದಂದು ಸಂದಲ್ ದಿನ ಅದನ್ನು ಇರಿಸಲಾಗಿರುವ ಪೆಟ್ಟಿಗೆಯ ದರ್ಶನ ಕಾರ್ಯಕ್ರಮ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಪೆಟ್ಟಿಗೆಯ ದರ್ಶನ ಪಡೆದು ಪುನೀತರಾದರು. ಭಾನುವಾರ ಉರುಸು ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಇಷ್ಟಾರ್ಥಗಳ ನೆರವೇರಿಕೆಗಾಗಿ ಸಣ್ಣ ಜಹಾಜ್ (ದೋಣಿ)ಯಲ್ಲಿ ದೀಪ ಇರಿಸಿ ಬಿಡುವ ಪರಂಪರೆ ಇದ್ದು, ಈ ಪರಂಪರೆಯನ್ನು ಸಮುದಾಯದ ಭಕ್ತರು ನೆರವೇರಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net