ಕೋಟೆನಗರಿಯಲ್ಲಿ ಈದ್ ಮಿಲಾದ್ ಸಡಗರ

CTD 28 ED MILAD
Published on

ಚಿತ್ರದುರ್ಗ: ಶಾಂತಿಧೂತ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಗುರುವಾರ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಬಡಾಮಕಾನ್‌ನಿಂದ ಆರಂಭವಾದ ಮೆರವಣಿಗೆ ಬಸವೇಶ್ವರ ಟಾಕೀಸ್, ಗೋಪಾಲಪುರ, ಉಮರ್ ಸರ್ಕಲ್, ಆಜಾದ್ ನಗರ, ಅಂಜುಮನ್ ಸರ್ಕಲ್, ಎಸ್‌ಬಿಎಂ, ಗಾಂಧಿ, ಹೊಳಲ್ಕೆರೆ ರಸ್ತೆ, ಅಗಸನಕಲ್ಲು, ನೆಹರು ನಗರ ಮತ್ತಿತರ ರಸ್ತೆಗಳಲ್ಲಿ ಸಾಗಿ ಗಾಂಧಿ ವೃತ್ತಕ್ಕೆ ಮರಳಿತು. ಬಳಿಕ ಚಿಕ್ಕಪೇಟೆ ಸುಲ್ತಾನ್ ಜಾಮೀಯಾ ಮಸೀದಿ ತಲುಪಿ ಮುಕ್ತಾಯಗೊಂಡಿತು. ಅಲ್ಲಿ ಪ್ರಾರ್ಥನೆ ನಂತರದಲ್ಲಿ ಧರ್ಮಗುರುಗಳು, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಕುರಿತು ಪ್ರವಚನ ನಡೆಸಿಕೊಟ್ಟರು.

ಹಸಿರು ಬಣ್ಣದ ಬಾವುಟಗಳನ್ನು ಹಿಡಿದು ಸಾಗುತ್ತಿದ್ದ ಯುವಕರು, ಬೃಹತ್ ಬಾವುಟಗಳನ್ನು ಕೈಯಲ್ಲಿಡಿದು ತಿರುಗಿಸುತ್ತಿದ್ದು ಗಮನಸೆಳೆಯಿತು. ಟಿಪ್ಪು ಸುಲ್ತಾನ್ ಚಿತ್ರವಿರುವ ಬಾವುಟಗಳ ರಾರಾಜಿಸಿದವು.

ಅಲಂಕೃತ ಜಟಕಾಬಂಡಿ, ಎತ್ತಿನಗಾಡಿಗಳು, ಆಟೋ, ಬೈಕ್ ಮೊದಲಾದ ವಾಹನಗಳು ಮೆರವಣಿಗೆಯಲ್ಲಿ ಸಾಗಿದವು. ನಗರದ ಪ್ರಮುಖ ವೃತ್ತ, ರಸ್ತೆಗಳನ್ನು ಹಸಿರು-ಬಿಳಿ ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿತ್ತು. ಗಾಂಧಿ ವೃತ್ತದಲ್ಲಿ ಪ್ರವಾದಿ ಮಹಮದ್ ಪೈಗಂಬರ್ (ಸ) ಅವರ ತತ್ವ ಸಂದೇಶಗಳು ವಿಶೇಷವಾಗಿ ಗಮನಸೆಳೆದವು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ಅಧ್ಯಕ್ಷ ಡಾ.ಟಿಪ್ಪು ಖಾಸಿಂ ಆಲಿ, ಎಚ್.ಶಬ್ಬೀರ್ ಬಾಷಾ, ಜಿಲ್ಲಾವಕ್ಫ್ ಮಂಡಳಿ ಅಧ್ಯಕ್ಷ ಎಂಸಿಒ ಬಾಬು, ಉಪಾಧ್ಯಕ್ಷ ನಯಾಜ್ ಬಾಷಾ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ಲಾ, ನಗರಸಭೆ ಮಾಜಿ ಉಪಾಧ್ಯಕ್ಷ ಸೈಯದ್ ಅಲ್ಲಾಭಕ್ಷಿ, ಶಿಕ್ಷಣ ಇಲಾಖೆ ನಿವೃತ್ತ ನೌಕರ ಸೈಯದ್ ಅಫಾಖ್ ಅಹಮದ್, ಸೈಯದ್ ಖುದ್ದೂಸ್, ಮಹಮದ್ ಚೋಟು ಹಾಗೂ ಧರ್ಮಗುರುಗಳು ಭಾಗವಹಿಸಿದ್ದರು.

ಹಣ್ಣು ವಿತರಣೆ: ಈದ್‌ಮಿಲಾದ್ ಅಂಗವಾಗಿ ನಗರದ ಆರ್‌ಎಂಡಿಆಯಿಲ್ ಇಂಡಸ್ಟ್ರಿಸ್ ಮಾಲೀಕ ಹಾಜಿ ಆರ್.ದಾದಾಪೀರ್ ಜಿಲ್ಲಾಸ್ಪತ್ರೆಯಲ್ಲಿ ಹಣ್ಣುಗಳನ್ನು ವಿತರಿಸಿದರು. ಡಾ.ರಹಮತ್‌ವುಲ್ಲಾ, ಜುಬೇರ್ ಅನ್ಸಾರಿ, ಅಕ್ಬರ್, ಅಫೀಜ್ ರೆಹಮಾನ್, ಇರ್ಫಾನ್, ವಕೀಲ ಸಿರಾಜ್,ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೇವರಾಜ್, ಆರ್‌ಎಂಒ ಡಾ.ಆನಂದಪ್ರಕಾಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net