

ಬೆಂಗಳೂರು: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಮುಸ್ಲಿಂ ಬಾಂಧವರು ಶ್ರದ್ಧಾ - ಭಕ್ತಿ ಹಾಗೂ ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು.
ಎಂದಿನಂತೆ ನಗರದ ದರ್ಗಾಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಯಮ ಮಾಡಿಕೊಂಡರು. ಕೆಲವೆಡೆ ಧಾರ್ಮಿಕ ಸಭೆಗಳು ನಡೆಯಿತು. ಬಡವರಿಗೆ ಹಾಲು, ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಕೆಲವೆಡೆ ರಕ್ತದಾನ ಶಿಬಿರ, ಆರೋಗ್ಯ ಶಿಬಿರಗಳನ್ನು ನಡೆಸಲಾಯಿತು.
ಸಂಜೆ 4 ಗಂಟೆ ಸುಮಾರಿಗೆ ನಗರದ ವಿವಿಧ ಭಾಗಗಳಿಂದ ಮಹಮ್ಮದ್ ಪೈಂಗಂಬರರ ಸಂದೇಶ ಸಾರುವ ಸ್ಥಬ್ಧಚಿತ್ರಗಳ ಬೃಹತ್ ಮೆರವಣಿಗೆ ನಡೆಯಿತು. ಮೈಸೂರು ರಸ್ತೆಯ ನಾಯಂಡಹಳ್ಳಿ ಕಡೆಯಿಂದ ಕೆ.ಆರ್. ಮಾರುಕಟ್ಟೆ, ಪುರಭವನ ಮಾರ್ಗವಾಗಿ ಸಾಗಿದ ಬೃಹತ್ ಮೆರವಣಿಗೆ ವೈಎಂಸಿಎ ಮೈದಾನ ತಲುಪಿತು. ಇದೇ ರೀತಿ ಜೆ.ಸಿ.ನಗರ ಭಾಗದಿಂದ ಜಯಮಹಲ್ ಮಾರ್ಗವಾಗಿ ಹಾಗೂ ಟ್ಯಾನರಿ ರಸ್ತೆ ಕಡೆಯಿಂದ, ಹೆಗಡೆ ನಗರ ಕಡೆಯಿಂದ, ಕೋರಮಂಗಲ, ನೀಲಸಂದ್ರ ಸೇರಿ ನಗರದ ನಾನಾ ಭಾಗಗಳಿಂದ ಆಗಮಿಸಿ ಮೆರವಣಿಗೆ ವೈಎಂಸಿಎ ಮೈದಾನ ಸೇರಿದವು. 7.30ರ ಸುಮಾರಿಗೆ ಧಾರ್ಮಿಕ ಸಭೆ ಆರಂಭವಾಯಿತು. ಮುಸ್ಲಿಂ ಧರ್ಮದ ಗುರುಗಳು ಪ್ರವಚನ ನೀಡಿದರು. ರಾಜಕೀಯ ಗಣ್ಯರು ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಈದ್ ಶುಭ ಕೋರಿದರು.