ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ಈದ್ ಮಿಲಾದ್ ಆಚರಣೆ

28 smg 9
Published on

ಶಿವಮೊಗ್ಗ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಗುರುವಾರ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಈದ್ ಮಿಲಾದ್ ಅಂಗವಾಗಿ ಜಿಲ್ಲೆಯ ವಿವಿಧೆಡೆ ಮೌಲೀದ್ ಹಾಗೂ ಮಿಲಾದ್ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಮುಸ್ಲಿಂ ಯುವಕರು ಹುರುಪಿನಿಂದ ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಧ್ವನಿವರ್ಧಕದ ಮೂಲಕ ಪೈಗಂಬರ್ ಸ್ಮರಣೆಯ ಗೀತೆಗಳು ಮೊಳಗಿದವು. ಬೆಳಗ್ಗೆಯಿಂದಲೇ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷಾ ನೇತೃತ್ವದಲ್ಲಿ ಹಣ್ಣು ವಿತರಿಸಲಾಯಿತು.
ಶಿವಮೊಗ್ಗದಲ್ಲಿ ಈದ್ ಮೆರವಣಿಗೆಯನ್ನು ಅ.1ಕ್ಕೆ ಮುಂದೂಡಲಾಗಿದೆ. ಮಸೀದಿ ಇರುವ ರಸ್ತೆಗಳ ಇಕ್ಕೆಲಗಳಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಡಾವಣೆಗಳ ರಸ್ತೆ ಪಕ್ಕದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಈದ್ ಮಿಲಾದ್‌ಗೆ ಶುಭಾಶಯ ಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.
ಅ.1ರ ಮಧ್ಯಾಹ್ನ 3ರ ಸುಮಾರಿಗೆ ಗಾಂಧಿ ಬಜಾರ್‌ನ ಜಾಮಿಯಾ ಮಸೀದಿ ಆವರಣದಿಂದ ಈದ್ ಮೆರವಣಿಗೆ ಆರಂಭವಾಗಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಅಂದು ಶಿವಮೊಗ್ಗ ನಗರದಲ್ಲಿ ವಾಹನಗಳ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ.

ಬೆಜ್ಜವಳ್ಳಿಯಲ್ಲಿ ಸೌಹಾರ್ದ
ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿಯಲ್ಲಿ ಈದ್ ಮೆರವಣಿಗೆಯಲ್ಲಿ ಸಾಗುತ್ತಿದ್ದ ಮುಹಿದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬಾವ ಕೋಟೆಗದ್ದೆ ಹಾಗೂ ಸಂಗಡಿಗರಿಗೆ ಗಜಾನನ ಸೇವಾ ಸಮಿತಿ ಅಧ್ಯಕ್ಷ ಹೆಬ್ಬುಲಿಗೆ ಸುನೀಲ್ ಹಾಗೂ ಸಮಿತಿ ಪದಾಧಿಕಾರಿಗಳು ಹಣ್ಣು ವಿತರಿಸಿ ಸೌಹಾರ್ದ ಮೆರೆದರು. ಕೆಲ ದಿನಗಳ ಹಿಂದೆ ಗಜಾನನ ಸಮಿತಿ ಗಣೇಶ ಮೆರವಣಿಗೆ ನಡೆಸುತ್ತಿದ್ದ ವೇಳೆ ಜುಮ್ಮಾ ಮಸೀದಿಯಿಂದ ಹಣ್ಣು ಹಾಗೂ ತಂಪು ಪಾನೀಯ ವಿತರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net