

ಕಿನ್ನಿಗೋಳಿ: ಈದ್ ಮಿಲಾದ್ ಪ್ರಯುಕ್ತ ಶಾಂತಿನಗರ ಖಿಲ್ರಿಯಾ ಜುಮಾ ಮಸೀದಿಯ ನೂರಲ್ ಹುದಾ ಅಸೋಸಿಯೇಶನ್ ವತಿಯಿಂದ ಕಿನ್ನಿಗೋಳಿ ಪೇಟೆಯಲ್ಲಿ ಈದ್ ಮಿಲಾದ್ ರ್ಯಾಲಿ ನಡೆಯಿತು.
ಖಿಲ್ರಿಯಾ ಜುಮಾ ಮಸೀದಿ ಖತೀಬ್ ಉಮರುಲ್ ಫಾರೂಕ್ ಸಖಾಫಿ ಮಾತನಾಡಿ, ಪ್ರವಾದಿ ಮುಹಮ್ಮದ್ ಅವರು ಈ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಾಗಿದ್ದಾರೆ. ವಿಶ್ವಕ್ಕೆ ಮಾನವತೆಯ ಸಂದೇಶ ಸಾರಿದವರಾಗಿದ್ದಾರೆ. ಸ್ವಾಮಿ ವಿವೇಕಾನಂದ, ಬ್ರಹ್ಮಶ್ರೀ ನಾರಾಯಣ ಗುರು, ಮೈಕಲ್ ಎಚ್.ಹರ್ಟ್ರಂತಹ ಸಾವಿರಾರು ಮಂದಿ ನೇತಾರರು ಮುಹಮ್ಮದ್ ಅವರ ಕುರಿತು ಆಡಿರುವ ಮೆಚ್ಚುಗೆಯ ಮಾತುಗಳೇ ಅದಕ್ಕೆ ಸಾಕ್ಷಿ. ಪ್ರವಾದಿವರ್ಯರ ಜೀವನ ಮಾನವ ಕುಲಕ್ಕೆ ಅನುಕರಣೀಯವಾಗಿದೆ ಎಂದರು.
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಟಿ.ಎ.ಹನೀಫ್, ಉಪಾಧ್ಯಕ್ಷ ನವಾಝ್ ಕಲ್ಕರೆ, ಕಾರ್ಯದರ್ಶಿ ಇಕ್ಬಾಲ್ ಗುತ್ತಕಾಡು, ಜತೆ ಕಾರ್ಯದರ್ಶಿ ಆರಿಫ್ ಗುತ್ತಕಾಡು, ಖಜಾಂಚಿ ನಾಸೀರ್, ಲೆಕ್ಕ ಪರಿಶೋಧಕ ಜೆ.ಎಚ್.ಜಲೀಲ್, ಸಾಮಾಜಿಕ ಕಾರ್ಯಕರ್ತ ಟಿ.ಕೆ.ಅಬ್ದುಲ್ ಖಾದರ್, ಕಿನ್ನಿಗೋಳಿ ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಚ್.ಮಯ್ಯದ್ದಿ, ಎಂ.ಜೆ.ಎಂ.ಕಿನ್ನಿಗೋಳಿ ಖತೀಬ್ ನೌಶಾದ್ ಅಝ್ಹರಿ, ಸಹ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಮದ್ರಸ ವಿದ್ಯಾರ್ಥಿಗಳಿಂದ ಮೆರವಣಿಗೆ, ತಾಲೀಮು ಪ್ರದರ್ಶನ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕ ಶಾಂತಿನಗರ ಹಾಗೂ ಕಿನ್ನಿಗೋಳಿ ಆಟೋ ರಿಕ್ಷಾ ಚಾಲಕ-ಮಾಲೀಕರ ಸಂಘ ವತಿಯಿಂದ ಸಿಹಿತಿಂಡಿ, ತಂಪು ಪಾನೀಯ ವಿತರಿಸಲಾಯಿತು. ಕಿನ್ನಿಗೋಳಿ ಬಸ್ ಚಾಲಕ-ಮಾಲೀಕರ ಸಂಘ ಬಸ್ ನಿಲ್ದಾಣದ ಬಳಿ ಕಾರ್ಯಕ್ರಮ ನಡೆಸಲು ಬೇಕಾದ ಸಹಕಾರ ನೀಡಿತು.