ಪ್ರತಿಯೊಂದು ಹಬ್ಬಗಳೂ ತ್ಯಾಗ, ಭ್ರಾತೃತ್ವದ ಸಂಕೇತ

UDP-22-8-SouhardhaKoota
ಉಡುಪಿಯಲ್ಲಿ ಆಯೋಜಿಸಿದ್ದ ಈದ್​ ಸೌಹಾರ್ದ ಕೂಟದಲ್ಲಿ ಬನ್ನಂಜೆ ಬಾಬು ಅಮೀನ್​ ಮಾತನಾಡಿದರು. ಡಾ.ವಿನ್ಸೆಂಟ್​ ಆಳ್ವಾ, ಮಹಮ್ಮದ್​ ಕೆ., ನಿಸಾರ್​ ಅಹಮದ್​ ಉಪಸ್ಥಿರಿದ್ದರು.
Published on

ಡಾ. ವಿನ್ಸೆಂಟ್​ ಆಳ್ವಾ ಅಭಿಪ್ರಾಯ | ಉಡುಪಿಯಲ್ಲಿ ಈದ್​ ಸೌಹಾರ್ದ ಕೂಟ

ಉಡುಪಿ: ಪ್ರತಿಯೊಂದು ಹಬ್ಬಗಳೂ ಸಮಾಜದಲ್ಲಿ ಸಂತೋಷವನ್ನೇ ಹಂಚುತ್ತದೆ. ಕೇವಲ ಮನೆಯವರಷ್ಟೇ ಹಬ್ಬ ಆಚರಿಸಿದರೆ ಅದು ಹಬ್ಬವಾಗದು. ಇತರರೊಂದಿಗೆ ಸೇರಿ ಆಚರಿಸಿ, ಸಂತಸ ಅನುಭವಿಸಿದರೆ ಅದು ಹಬ್ಬ ಎನಿಸುತ್ತದೆ. ಹಬ್ಬಗಳು ತ್ಯಾಗ ಮತ್ತು ಭ್ರಾತೃತ್ವದ ಸಂಕೇತವಾಗಿದೆ ಎಂದು ಕಲ್ಯಾಣಪುರ ಮಿಲಾಗ್ರೀಸ್​ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್​ ಆಳ್ವಾ ಅಭಿಪ್ರಾಯಪಟ್ಟರು.

ಉಡುಪಿಯ ಆವೆ ಮರಿಯಾ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮೀ ಹಿಂದ್​ ಉಡುಪಿ ವತಿಯಿಂದ ಶುಕ್ರವಾರ ರಾತ್ರಿ ಆಯೋಜಿಸಿದ್ದ ಈದ್​ ಸೌಹಾರ್ದ ಕೂಟದಲ್ಲಿ ಮಾತನಾಡಿದರು.

ಸೌಹಾರ್ದತೆ ಅಗತ್ಯ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್​ ಮಾತನಾಡಿ, ಕರಾವಳಿಯಲ್ಲಿ ಮುಸ್ಲಿಂ ಹಾಗೂ ಕ್ರೈಸ್ತರ ಕೊಡುಗೆಯೂ ಬಹಳ ಇದೆ. ಹಿಂದುಗಳು ಸೇರಿ ಎಲ್ಲ ಧಮೀರ್ಯರೂ ಸೌಹಾರ್ದತೆಯಿಂದ ಬದುಕು ನಡೆಸಬೇಕಿದೆ ಎಂದರು.

ಶ್ರೇಷ್ಠ, ಕನಿಷ್ಠ ಬೇಡ

ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್​ ರಾಜ್ಯ ಕಾರ್ಯದರ್ಶಿ ಮಹಮ್ಮದ್​ ಕೆ. ಮಾತನಾಡಿ, ಜನಾಂಗೀಯತೆ ಇರಬಾರದು. ನಾನು ಶ್ರೇಷ್ಠ, ನೀನು ಕನಿಷ್ಠ ಎಂಬ ಭಾವ ಮೂಡಿದಾಗ ಜನಾಂಗೀಯತೆ ಹುಟ್ಟಲು ಕಾರಣವಾಗುತ್ತದೆ. ಅದರ ಬದಲಾಗಿ ನಾವೆಲ್ಲರೂ ಮಾನವರು, ಪರಸ್ಪರ ಸಹೋದರರು ಎಂಬ ಭಾವನೆ ಸದಾ ನಮ್ಮಲ್ಲಿ ಇರಬೇಕಾಗಿದೆ. ನಮ್ಮ ಹಿರಿಯರ ತ್ಯಾಗ, ಬಲಿದಾನದಿಂದ ನಾವೆಲ್ಲ ಇಲ್ಲಿಯವರೆಗೆ ತಲುಪಿದ್ದೇವೆ ಎಂದರು.

ಜಮಾಅತೆ ಇಸ್ಲಾಮೀ ಹಿಂದ್​ ಸ್ಥಾನೀಯ ಅಧ್ಯಕ್ಷ ನಿಸಾರ್​ ಅಹಮದ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ವಿಭಾಗದ ಸಂಚಾಲಕಿ ವಾಜಿದಾ ತಬಸ್ಸುಮ್​ ವಂದಿಸಿದರು. ಸರ್ಪರಾಜ್​ ಮನ್ನ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net