ಗುಮ್ಮಟ ನಗರಿಯಲ್ಲಿ ‘ಈದ್’ ಸಡಗರ-ಸಂಭ್ರಮ

RAMJAN
ವಿಜಯಪುರ ನಗರದ ದಖನಿ ಈದ್ಗಾದಲ್ಲಿ ‘ಈದ್-ಉಲ್- ಫಿತರ್’ ಹಿನ್ನೆಲೆ ಮುಸ್ಲಿಂ ಧರ್ಮಿಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Published on

ವಿಜಯಪುರ: ಮುಸ್ಲಿಂರ ಪವಿತ್ರ ಹಬ್ಬ ‘ಈದ್-ಉಲ್- ಫಿತರ್’ನ್ನು ಸೋಮವಾರ ಜಿಲ್ಲಾದ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಳೆದೊಂದು ತಿಂಗಳಿಂದ ಉಪವಾಸ, ವೃತ, ಪ್ರಾರ್ಥನೆ, ಸಾಮೂಹಿಕ ಭೋಜನ ಮತ್ತಿತರ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬಂದಿದ್ದು, ಇದೀಗ ಅಂತಿಮ ದಿನದಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಅದ್ದೂರಿಯಾಗಿ ಆಚರಿಸುವ ಮೂಲಕ ಹಬ್ಬ ಸಂಪನ್ನಗೊಳಿಸಲಾಯಿತು.

ನಸುಕಿನ ಜಾವದಿಂದಲೇ ಹಬ್ಬದ ತಯಾರಿಯಲ್ಲಿ ತೊಡಗಿಸಿಕೊಂಡ ಸಮುದಾಯದ ಜನ ಮಕ್ಕಳಾದಿಯಾಗಿ ವೃದ್ಧರವರೆಗೆ ಹೊಸ ಬಟ್ಟೆ ಧರಿಸಿ, ಸುಗಂಧದ್ರವ್ಯ ಹಚ್ಚಿಕೊಂಡು, ಕಣ್ಣಿಗೆ ಸುರಮಾ ಹಚ್ಚಿಕೊಂಡು ಪ್ರಾರ್ಥನೆಗಾಗಿ ಈದ್ಗಾ ಹಾಗೂ ಮಸೀದಿಗಳತ್ತ ಹೆಜ್ಜೆ ಹಾಕಿದರು. ಸಾಮೂಹಿಕವಾಗಿ ಯಾವುದೇ ಬೇಧ-ಭಾವವಿಲ್ಲದೇ ಒಟ್ಟಾಗಿ ಹೆಜ್ಜೆ ಹಾಕುತ್ತಿದ್ದರೆ ಭಕ್ತಿ-ಭಾವ ಸ್ಪುರಿಸುವಂತೆ ಮಾಡಿತು. ಅಲ್ಲಾಹು ಅಕ್ಬರ್...ಅಲ್ಲಾಹು ಅಕ್ಬರ್, ಲಾ ಇಲಾಹ ಇಲ್ಲಲ್ಲಾಹ...ಎಂದು ತಕಬೀರ್ ಹೇಳುತ್ತಾ ಹೋಗುತ್ತಿರುವ ದೃಶ್ಯ ಜನಮನ ಸೂರೆಗೊಂಡಿತು.

ವಿಜಯಪುರದ ದಖನಿ ಈದ್ಗಾ, ಆಲಂಗೀರ ಈದ್ಗಾ, ಜಾಮೀಯಾ ಮಸೀದಿ, ಧಾತರಿ ಮಸೀದಿ, ಯಾಸೀನ್ ಮಸೀದಿ, ಆಸಾರ ಮಹಲ್ ಸೇರಿದಂತೆ ವಿವಿಧ ಮಸೀದಿ ಮತ್ತು ಈದ್ಗಾಗಳಲ್ಲಿ ಪ್ರಾರ್ಥನೆ ನೆರವೇರಿತು. ಬಳಿಕ ಈದ್ ಪ್ರಯುಕ್ತ ಸಿದ್ದಪಡಿಸಲಾಗುವ ಹಾಲು, ಮಸಾಲೆ ಪದಾರ್ಥಗಳನ್ನು ಒಳಗೊಂಡ ಸಿರಕುರಮಾ ಸವಿದರು. ಸ್ನೇಹಿತರಿಗಾಗಿ ಔತಣಕೂಟ ಏರ್ಪಡಿಸಿದರು. ಹಿಂದು ಬಾಂಧವರು ಪ್ರೀತಿಯ ಔತಣಕೂಟದಲ್ಲಿ ಭಾಗಿಯಾಗಿ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net