ಅವಳಿ ಜಿಲ್ಲೆಗಳಲ್ಲಿ ಸರಳ ಈದ್ ಮಿಲಾದ್, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ರಹಿತ ಆಚರಣೆ

eid
Published on

ಮಂಗಳೂರು/ಉಡುಪಿ: ಪ್ರವಾದಿ ಮಹಮ್ಮದ್ ಅವರ ಜನ್ಮದಿನವಾದ ಮಿಲಾದುನ್ನಬಿಯನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುರುವಾರ ಮುಸ್ಲಿಮರು ಸರಳವಾಗಿ ಆಚರಿಸಿದರು.

ಕೋವಿಡ್-19 ಹಾಗೂ ಜಿಲ್ಲಾಡಳಿತಗಳ ಮಾರ್ಗಸೂಚಿ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆಯುವ ಯಾವುದೇ ಮೆರವಣಿಗೆ ಈ ಬಾರಿ ನಡೆದಿಲ್ಲ. ಮಸೀದಿ, ಮದ್ರಸಗಳಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಿರಲಿಲ್ಲ.

ಮಂಗಳೂರಿನ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಮತ್ತು ಅದರ ಆವರಣದಲ್ಲಿರುವ ಜಲಾಲ್ ಮಸ್ತಾನ್ ದರ್ಗಾ ಸಮಿತಿ ವತಿಯಿಂದ ಬುಧವಾರ ರಾತ್ರಿ ಮೌಲೂದ್ ಪಾರಾಯಣ ಮತ್ತು ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮೀಣ ಪ್ರದೇಶದಲ್ಲೂ ಮೆರವಣಿಗೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮ ಇರಲಿಲ್ಲ. ಬುಧವಾರ ರಾತ್ರಿ ಮೌಲೂದ್ ಪಾರಾಯಣ ನಡೆಯಿತು. ಕೆಲವೆಡೆ ಮಸೀದಿಗಳಲ್ಲಿ ಗುರುವಾರ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದರೂ, ಅಲ್ಲಿ ಊಟ ಮಾಡುವ ಬದಲಿಗೆ ಮನೆಗಳಿಗೆ ವಿತರಣೆ ಮಾಡಲಾಗಿತ್ತು.

ಉಡುಪಿ ಜಿಲ್ಲೆಯ ಮಸೀದಿಗಳಲ್ಲಿ ಬೆಳಗ್ಗೆ ಧ್ವಜಾರೋಹರಣ ಬಳಿಕ ಮೌಲಿದ್ ಪಾರಾಯಣ ನಡೆಸಲಾಯಿತು. ಜಿಲ್ಲಾ ಸಂಯುಕ್ತ ಜಮಾಅತ್ ಕೇಂದ್ರ ಮಸೀದಿಯಾಗಿರುವ ಮುಳೂರು ಜುಮಾ ಮಸೀದಿಯಲ್ಲಿ ಜಿಲ್ಲಾ ಸಹಾಯಕ ಖಾಜಿ ಅಲ್‌ಹಾಜ್ ಬಿ.ಕೆ. ಅಬ್ದುರ‌್ರಹ್ಮಾನ್ ಮದನಿ ಮುಳೂರು ಸಂದೇಶ ನೀಡಿದರು.

ನಿರ್ಗತಿಕರಿಗೆ ಊಟ: ಬಡವರು, ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಒಂದು ಹೊತ್ತಿನ ಊಟ ವಿತರಿಸುವ ಮೂಲಕ ಉಡುಪಿ ಹಾಗೂ ಪಡುಬಿದ್ರಿಯ ಸಮಾನ ಮನಸ್ಕ ಮುಸ್ಲಿಮರು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್, ಅಮೀರ್ ಪಡುಬಿದ್ರಿ, ಸೈಯದ್ ನಿಜಾಮುದ್ದೀನ್ ಸೇರಿದಂತೆ 20ಕ್ಕೂ ಅಧಿಕ ಮಂದಿ 600 ಊಟದ ಪೊಟ್ಟಣಗಳನ್ನು ಪಡುಬಿದ್ರಿಯಿಂದ ಬ್ರಹ್ಮಾವರದವರೆಗೆ ದಾರಿಬದಿಯಲ್ಲಿ ನಿರ್ಗತಿಕರು, ಭಿಕ್ಷುಕರಿಗೆ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net