ಕೊಡಗು ಏಟಿಗೆ ಹೊಸಪೇಟೆಯಲ್ಲಿ ತಿರುಗೇಟು; ಬಿಜೆಪಿ ನಾಯಕರ ಫ್ಲೆಕ್ಸ್‌ಗೆ ಮೊಟ್ಟೆ-ಸಗಣಿ ಎಸೆದು ಆಕ್ರೋಶ..

Egg
Published on

ಹೊಸಪೇಟೆ: ಮಡಿಕೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಲಾಂಛನ ಹಾಗೂ ಪಕ್ಷದ ನಾಯಕರ ಭಾವಚಿತ್ರ ಇರುವ ಫ್ಲೆಕ್ಸ್‌ಗೆ ಮೊಟ್ಟೆ ಹೊಡೆದು, ಸಗಣಿ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‌ನಿಂದ ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಿ.ಟಿ.ರವಿ ಭಾವಚಿತ್ರವಿರುವ ಬಿಜೆಪಿ ಫ್ಲೆಕ್ಸ್‌ಗೆ ಮೊಟ್ಟೆ ಹಾಗೂ ಸಗಣಿ ಎಸೆದು ಧಿಕ್ಕಾರ ಕೂಗಿದರು.

ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬಲು ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕ್ಷುಲ್ಲಕ ಕಾರಣಕ್ಕೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಸಣ್ಣತನ ಪ್ರದರ್ಶಿಸಿದ್ದಾರೆ. ಅಧಿಕೃತ ಪ್ರವಾಸ ಕಾರ್ಯಕ್ರಮ ಇದಾಗಿದ್ದರೂ, ಸೂಕ್ತ ಭದ್ರತೆ ಒದಗಿಸುವಲ್ಲಿ ಅಲ್ಲಿನ ಪೊಲೀಸ್ ಇಲಾಖೆ ವಿಫಲವಾಗಿದೆ. ತಕ್ಷಣವೇ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಘಟನೆಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು. ಇಲ್ಲವೇ ಸಿದ್ದರಾಮಯ್ಯ ಅಭಿಮಾನಿಗಳು ರಾಜ್ಯಾದ್ಯಂತ ಬೀದಿಗಿಳಿಯಲಿದ್ದಾರೆ. ಇದರಿಂದ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾದರೆ, ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಪ್ರತಿಭಟನಾಕಾರು ಎಚ್ಚರಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಭೀಮಾನಾಯ್ಕ, ಜೆ.ಎನ್.ಗಣೇಶ, ಮಾಜಿ ಶಾಸಕ ಚಂದ್ರಶೇಖರಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಪ್ರಮುಖರಾದ ಗುಜ್ಜಲ ನಾಗರಾಜ್, ರಾಘವೇಂದ್ರ ಗುಜ್ಜಲ, ಹೆಗ್ಡಾಳ್ ರಾಮಣ್ಣ, ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ, ರಾಜಶೇಖರ್ ಹಿಟ್ನಾಳ, ನಿಂಬಗಲ್ ರಾಮಕೃಷ್ಣ ಕಮಲಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಬ್ಲಾಕ್ ಅಧ್ಯಕ್ಷ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಮಹಿಳಾ ಘಟಕದ ಅಧ್ಯಕ್ಷೆ ಅಶಾಲತಾ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net